‘ಬಾರೋ ಬಾರೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲ, ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ…’ ಎಂದು ಹಾಡುತ್ತಾ ತಾಲ್ಲೂಕಿನ ಚೌಡಸಂದ್ರ ಮತ್ತು ಹಿತ್ತಲಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿದರು.
ಜಿಲ್ಲೆಯ ಗ್ರಾಮೀಣರು ಮಳೆ ಬಾರದಿದ್ದಾಗ ಹಲವು ಜಾನಪದ ಆಚರಣೆಗಳನ್ನು ಹಮ್ಮಿಕೊಳ್ಳುತ್ತಾರೆ. ‘ಮಳೆರಾಯ’ನ ಪೂಜೆ ಅಥವಾ ‘ವಾನರಾಯ ಪೂಜ’ ಎಂದು ಕರೆಯುವ ಆಚರಣೆಗಳಲ್ಲಿ ಗ್ರಾಮಸ್ಥರೆಲ್ಲಾ ಒಗ್ಗೂಡುತ್ತಾರೆ. ಪಡ್ಡೆ ಹುಡುಗರೆಲ್ಲ ಸೇರಿ ಕೆರೆ ಕಟ್ಟೆಯ ಹತ್ತಿರ ಹೋಗಿ ಜೇಡಿ ಮಣ್ಣಿನಿಂದ ಗೊಂಬೆಯೊಂದನ್ನು ತಯಾರಿಸುತ್ತಾರೆ. ಅದನ್ನು ಹಲಗೆ ಮೇಲಿಟ್ಟು ಒಬ್ಬ ಹುಡುಗನ ತಲೆ ಮೇಲೆ ಪ್ರತಿನಿತ್ಯ ಸಂಜೆ ಸಮಯ ಹೊರಿಸಿಕೊಂಡು ಮಳೆರಾಯನ ಕುರಿತು ಹಾಡುಗಳನ್ನು ಹೇಳುತ್ತಾ, ಸಿಳ್ಳೆ ಹಾಕುತ್ತಾ ಮನೆಮನೆಗಳ ಮುಂದೆ ಹೋಗುತ್ತಾರೆ. ಆಗ ಮನೆಯವರು ರಾಗಿ, ಅಕ್ಕಿ, ಬೇಳೆ, ಹಣವನ್ನು ಕಾಣಿಕೆಯಾಗಿ ಕೊಟ್ಟು ಮಳೆರಾಯನ ಗೊಂಬೆ ಹೊತ್ತ ಹುಡುಗನ ಮೇಲೆ ತಣ್ಣೀರನ್ನು ಸುರಿಯುತ್ತಾರೆ.
ಪ್ರತಿ ದಿನ ಚಂದ್ರಮನ ಆಕಾರದ ರಂಗೋಲಿಯನ್ನು ಗ್ರಾಮದ ಒಂದು ಮುಖ್ಯ ಸ್ಥಳದಲ್ಲಿ ಹಾಕಿ ಮಳೆರಾಯನನ್ನು ಪೂಜಿಸಲಾಗುತ್ತದೆ. ಇದನ್ನು ಐದು ಅಥವಾ ಒಂಭತ್ತು ದಿನಗಳು ಮುಂದುವರೆಸುತ್ತಾರೆ. ಕೊನೆಯ ದಿನದಂದು ಹೀಗೆ ಊರೆಲ್ಲಾ ಸುತ್ತಿ ಗ್ರಾಮಸ್ಥರೆಲ್ಲ ಒಗ್ಗೂಡಿ ತಮ್ಮದೇ ಆದ ರೀತಿಯಲ್ಲಿ ಉತ್ಸವ, ಕಲೆ, ಕಾವ್ಯ, ಹಾಡು, ಗೇಯಗಳಿಂದ ಆಚರಣೆಗೆ ಮೆರುಗನ್ನು ತುಂಬುತ್ತಾರೆ.
ಚೌಡಸಂದ್ರ ಮತ್ತು ಹಿತ್ತಲಹಳ್ಳಿಯಲ್ಲಿ ಮಳೆರಾಯನ ಆಚರಣೆಯ ಕೊನೆಯ ದಿನ ಇಬ್ಬರು ಗಂಡು ಮಕ್ಕಳಿಗೆ ಯಥಾವತ್ ಗಂಡು ಹೆಣ್ಣಿನ ಮದುವೆಯ ರೀತಿಯಲ್ಲೇ ಮದುವೆಯನ್ನು ಮಾಡಿದರು. ಚೌಡಸಂದ್ರದಲ್ಲಿ ಮಳೆರಾಯನನ್ನು ಭರತೇಶ ಹೊತ್ತಿದ್ದರೆ, ಹೆಣ್ಣಿನ ವೇಷಧಾರಿಯಾಗಿ ಹರಿಕೃಷ್ಣ ಮತ್ತು ಗಂಡಿನ ವೇಷಧಾರಿಯಾಗಿ ರಮೇಶ್ ಆಚರಣೆಯಲ್ಲಿ ಭಾಗಿಯಾಗಿದ್ದರು. ಗ್ರಾಮದ ಮಹಿಳೆಯರು ರಾಗಿಮುದ್ದೆ, ಪಾಯಸ, ಅನ್ನ, ಸಾರನ್ನು ತಯಾರಿಸಿ ಎಲ್ಲರಿಗೂ ಆಚರಣೆಯ ಮುಕ್ತಾಯದ ಸಂದರ್ಭದಲ್ಲಿ ಬಡಿಸಿದರು.