ಶ್ರೀನಿವಾಸಪುರ ತಾಲ್ಲೂಕಿನಲ್ಲಿ ನಿಯಮಾನುಸಾರ ಜಮೀನುಗಳನ್ನು ವಶಪಡಿಸಿಕೊಳ್ಳಲಾಗದೇ ರೈಲ್ವೆ ಕೋಚ್ ಫ್ಯಾಕ್ಟರಿಗಾಗಿ ಅರಣ್ಯ ಇಲಾಖೆಯ ಜಮೀನಿನಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಇಂಥಹ ಚುನಾವಣಾ ತಂತ್ರಗಾರಿಕೆಯನ್ನು ಮಾಡುತ್ತಿರುವ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಕೇವಲ ಗೆಲ್ಲುವ ಉದ್ದೇಶದ ಒಳಮರ್ಮವನ್ನು ಜನರು ಮನಗಾಣಬೇಕಾಗಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ ತಿಳಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದಲ್ಲಿ ಶನಿವಾರ ಚುನಾವಣಾ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಇಷ್ಟು ಮಾತ್ರದ ಕೆಲಸಕ್ಕೆ ಮೂವತ್ತು ವರ್ಷಗಳ ಕಾಲ ಜನರು ಅಧಿಕಾರ ನೀಡಿದ್ದರಾ ಎಂಬುದನ್ನು ಪ್ರಶ್ನಿಸಬೇಕಿದೆ. ಗಡಿ ಭಾಗದಲ್ಲಿರುವ ನಾವಿಲ್ಲಿ ನೀರಿಗಾಗಿ ಪರಿತಪಿಸುತ್ತಿದ್ದರೆ, ಕೆಲವೇ ಕಿಲೋಮೀಟರ್ ದೂರದ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಕಾರಣ ಅಲ್ಲಿ ರಾಜಕಾರಣಿಗಳ ರಾಜ್ಯಪ್ರೇಮವಾಗಿದೆ. ಅಲ್ಲಿ ಆರಿಸಿ ಬರುವವರೆಲ್ಲರೂ ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯದ ಬೆಳವಣಿಗೆಗೆ ಶ್ರಮಿಸುತ್ತಾರೆ. ಆದರೆ ಇಲ್ಲಿ ಆಯ್ಕೆಯಾಗಿದ್ದವರು ಶಾಶ್ವತ ನೀರನ್ನು ತರಲಾಗದೇ ಕೇವಲ ಚುನಾವಣೆ ಸಮಯದಲ್ಲಿ ಎತ್ತಿನಹೊಳೆ ಶಂಕುಸ್ಥಾಪನೆ ಮಾಡುವ ಮೂಲಕ ಜನರ ದಿಕ್ಕುತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
ಸೋಲಿನ ಭೀತಿಯಿಂದ ನನ್ನ ಎದುರಾಳಿಗಳು ನನ್ನ ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಲು ಪ್ರಯತ್ನಿಸಿದ್ದರು. ಆದರೂ ಅವರ ಆಟ ನಡೆಯಲಿಲ್ಲ. ದುಡಿಯುವ ಕೈಗಳಿಗೆ ಕೆಲಸ ನೀಡುವುದು, ಮನೆಗೊಂದು ಉದ್ಯೋಗ ಸೃಷ್ಠಿಸುವುದು ನನ್ನ ಉದ್ದೇಶ. ಆರೋಗ್ಯ, ನೀರು, ನೈರ್ಮಲ್ಯ, ಪರಿಸರ ಬಗ್ಗೆ ಕೆಲಸ ಮಾಡುವುದಾಗಿ ಹೇಳಿದರು. ಕುಮಾರಸ್ವಾಮಿ ಅವರು ಕೇವಲ 20 ತಿಂಗಳ ಅಧಿಕಾರದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅದೇ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವುದಾಗಿ ನನ್ನ ವಿರುದ್ಧವೂ ಅಪಪ್ರಚಾರ ನಡೆಯುತ್ತಿದೆ. ಭ್ರಷ್ಟ ಕಾಂಗ್ರೆಸ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅಗತ್ಯ ನನಗಿಲ್ಲ ಎಂದು ನುಡಿದರು.
ಜೆಡಿಎಸ್ ಮುಖಂಡರಾದ ಶಿವಾರೆಡ್ಡಿ, ಆಯಿಷಾ ಸುಲ್ತಾನ್, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.