ಭೂತಾನ್ ದೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವನ್ನು ಪ್ರಾರಂಭಿಸಿ. ಕರ್ನಾಟಕದಿಂದ ಬರುವ ಪ್ರವಾಸಿಗರಿಗೆ ಹಾಗೂ ಇಲ್ಲಿಗೆ ಉದ್ಯೋಗಕ್ಕೆಂದು ಬರುವವರಿಗೆ ಅದು ಸಂಸ್ಕೃತಿ, ಸಹಕಾರ ಮತ್ತು ಸಂಪರ್ಕದ ಕೊಂಡಿಯಾಗಲಿ ಎಂದು ಭೂತಾನ್ ದೇಶದ ಖ್ಯಾತ ಛಾಯಾಗ್ರಾಹಕ ಮತ್ತು ರೋಟರಿ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಯಶಿ ದೋರ್ಜಿ ತಿಳಿಸಿದರು.
ಭೂತಾನ್ ದೇಶದ ರಾಜಧಾನಿ ಥಿಂಪು ನಗರದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ಘಟಕದ ಪದಾಧಿಕಾರಿಗಳಿಂದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಭೂತಾನ್ ದೇಶವು ಆಧುನಿಕತೆಯತ್ತ ಮುಖಮಾಡಿದ್ದು ಕೆಲವು ವರ್ಷಗಳಿಂದೀಚೆಗೆ. ಆದರೂ ತನ್ನ ಮೂಲ ಸಂಸ್ಕೃತಿ, ಆಚಾರ, ಸಂಪ್ರದಾಯಗಳನ್ನು ಉಳಿಸಿಕೊಂಡಿದೆ. ಪ್ರಕೃತಿ ಸೌಂದರ್ಯ, ಮಾಲಿನ್ಯ ರಹಿತ ಮತ್ತು ಸಂತುಷ್ಟ ಜನರಿರುವ ದೇಶವೆಂದು ಜಗತ್ತಿನಾದ್ಯಂತ ಪ್ರವಾಸಿಗರು ಆಗಮಿಸುತ್ತಾರೆ. ಕನ್ನಡಿಗರೂ ಬಹಳಷ್ಟು ಮಂದಿ ಬಂದಿದ್ದಾರೆ, ಬರುತ್ತಾರೆ. ಭಾರತದ ಐಟಿ ಉದ್ಯಮವೂ ಭೂತಾನ್ ದೇಶದಲ್ಲಿ ತೊಡಗಿಸಿಕೊಂಡಿರುವುದರಿಂದ ಉದ್ಯೋಗಿಗಳಾಗಿ ಹಲವು ಕನ್ನಡಿಗರು ಬಂದಿದ್ದಾರೆ. ನಿಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯು ನಮ್ಮ ದೇಶದ ಜನರಿಗೂ ಪರಿಚಯ ಮಾಡಿಸುತ್ತಾ, ನಿಮ್ಮ ನಾಡಿನವರಿಗೆ ಪ್ರವೇಶಿಕೆಯಾಗುವಂತೆ ಘಟಕವನ್ನು ಪ್ರಾರಂಭಿಸಬಹುದು ಎಂದು ಸಲಹೆ ನೀಡಿದರು.
ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದಿಂದ ಭೂತಾನ್ ದೇಶದ ಬರ್ಡ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಖ್ಯಾತ ಛಾಯಾಗ್ರಾಹಕ ಮತ್ತು ರೋಟರಿ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಯಶಿ ದೋರ್ಜಿ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಶಿಡ್ಲಘಟ್ಟ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಪತ್ರಿಕಾ ಪ್ರತಿನಿಧಿಗಳಾದ ಎ.ಶಶಿಕುಮಾರ್, ರಮೇಶ್, ಜಂಗಮಕೋಟೆ ಹೋಬಳಿ ಸಂಚಾಲಕ ಜಗದೀಶ್‌ಬಾಬು, ಕಸಬಾ ಹೋಬಳಿ ಪತ್ರಿಕಾ ಪ್ರತಿನಿಧಿ ನರಸಿಂಹಗೌಡ, ಮಾಜಿ ತಾಲ್ಲೂಕು ಅಧ್ಯಕ್ಷ ರೂಪಸಿ ರಮೇಶ್, ವಿಜಯಪುರ ಕಸಾಪ ಘಟಕದ ಉಪಾಧ್ಯಕ್ಷ ಮುನಿನಾರಾಯಣ, ಸದಸ್ಯರಾದ ಮಲ್ಲಿಕಾರ್ಜುನ, ಮಂಜುನಾಥ, ಛಾಯಾ ರಮೇಶ್, ಮುನೇಗೌಡ, ರಾಜೇಶ್ ಹಾಜರಿದ್ದರು.