ಪ್ರಪಂಚದಲ್ಲಿಯೇ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಖ್ಯಾತಿಗಳಿಸಿದ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ೬೯ ವರ್ಷಗಳು ಕಳೆದರೂ ಈವರೆಗೂ ಮುಂದುವರಿದ ರಾಷ್ಟ್ರಗಳ ಗುಂಪಿಗೆ ಸೇರದೆ ಕೇವಲ ಮುಂದುವರಿಯುತ್ತಿರುವ ರಾಷ್ಟ್ರವಾಗಿಯೇ ಉಳಿದಿರುವುದು ವಿಷಾದನೀಯ ಎಂದು ಬಿಎಂವಿ ಶಾಲೆಯ ಕಾರ್ಯದರ್ಶಿ ಎಲ್.ಕಾಳಪ್ಪ ಹೇಳಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿ.ಎಂ.ವಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ೬೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಸ್ವಾತಂತ್ರ್ಯ ನಂತರದ ಪಂಚವಾರ್ಷಿಕ ಯೋಜನೆಗಳು ಸೇರಿದಂತೆ ಸರ್ಕಾರಗಳು ಜಾರಿಗೆ ತಂದ ಯಾವುದೇ ಯೋಜನೆಯಿಂದ ರೈತರಿಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ. ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ದಿನನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಈವರೆಗೂ ರೈತರ ಆತ್ಮಹತ್ಯೆ ತಡೆಗಟ್ಟಲು ಆಗಿಲ್ಲ. ಇಡೀ ದೇಶಕ್ಕೆ ಅನ್ನ ನೀಡುವ ರೈತ ಏನೇ ಕಷ್ಟ ಬಂದರೂ ಧೃತಿಗೆಡದೇ ಜೀವನ ಸಾಗಿಸಬೇಕು. ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದರು.
ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ. ಗೋಪಾಲಗೌಡ ಧ್ವಜಾರೋಹಣ ನೆರವೇರಿಸಿದರು.
ಬಿ.ಎಂ.ವಿ. ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಬಿ.ವಿ. ಮುನೇಗೌಡ, ಗ್ರಾಮ ಪಂಚಾಯತಿ ಪಿಡಿಓ ರಮಾಕಾಂತ್, ನಿವೃತ್ತ ಬ್ಯಾಂಕ್ ಅಧಿಕಾರಿ ಎಂ. ನಂಜೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರೆಡ್ಡಿ, ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಎಸ್.ಎನ್. ವೆಂಕಟೇಶ್, ಬಿಎಂವಿ ವಿದ್ಯಾಸಂಸ್ಥೆಯ ಟ್ರಸ್ಟಿಗಳಾದ ಬಿ.ವೈ. ಅಶ್ವತ್ಥಪ್ಪ, ಎಂ. ವೆಂಕಟಮೂರ್ತಿ, ಎಂ.ಪುಟ್ಟಮೂರ್ತಿ, ನಂಜುಂಡಾರಾಧ್ಯ, ಬಿ.ಸಿ.ರಾಮಚಂದ್ರ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.