ಕಠಿಣ ಶ್ರಮ, ತಪೋನಿಷ್ಠೆ, ಏಕಾಗ್ರತೆ, ದೈವಭಕ್ತಿ ಮತ್ತು ಸಾಹಸಕ್ಕೆ ‘ಭಗೀರಥ ಪ್ರಯತ್ನ’ ಎಂಬ ನುಡಿಗಟ್ಟಿಗೆ ಕಾರಣರಾದ ಭಗೀರಥ ಪುಣ್ಯಪುರುಷ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಉಪ್ಪಾರ ಸಂಘದ ಸಹಯೋಗದಲ್ಲಿ ಆಚರಿಸಿದ ಭಗೀರಥ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಪ್ಪಾರ ಜನಾಂಗ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗುವುದರೊಂದಿಗೆ ಸಮಾಜಮುಖಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ದೊಡ್ಡತೇಕಹಳ್ಳಿ ಟಿ.ಗಂಗಪ್ಪ ಮಾತನಾಡಿ, ‘ಸೂರ್ಯವಂಶದ ಕ್ಷತ್ರಿಯರು ಕ್ಷತ್ರಿಯತ್ವವನ್ನು ತ್ಯಜಿಸಿ ‘ಉಪವೀರ’ ಎಂಬ ಹೆಸರಿನಿಂದ ಭೂಮಿಯ ಮಣ್ಣಿನ ಕ್ಷಾರ ಲವಣದಿಂದ ಉಪ್ಪು ತಯಾರಿಸಿ ವೃತ್ತಿ ಜೀವನ ನಡೆಸಿ ಉಪ್ಪಾರರಾಗಿದ್ದಾರೆ. ಕ್ಷತ್ರಿಯ ಕುಲದಲ್ಲಿ ಹುಟ್ಟಿ ತನ್ನ ತಪೋಬಲದಿಂದ ಮಹರ್ಷಿ ಎನಿಸಿಕೊಂಡ ಭಗೀರಥ ನಮ್ಮ ಕುಲದೈವವಾಗಿದ್ದು, ಪ್ರತಿವರ್ಷ ಆತನ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ಈ ಬಾರಿಯಿಂದ ಸರ್ಕಾರವೂ ಆಚರಣೆಯಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಕಾರ್ಯನಿರ್ವಾಹಣಾಧಿಕಾರಿ ಡಿ.ಎನ್.ಗುರುಬಸಪ್ಪ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಎಇಇ ಶಿವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ರಘುನಾಥರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -