Home News ಬೈಪಾಸ್ ರಸ್ತೆಯಲ್ಲಿನ ಗಿಡಗಂಟೆಗಳ ತೆರವು

ಬೈಪಾಸ್ ರಸ್ತೆಯಲ್ಲಿನ ಗಿಡಗಂಟೆಗಳ ತೆರವು

0

ನಗರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವ ಬೈಪಾಸ್ ರಸ್ತೆಯಲ್ಲಿನ ತಿರುವಿನಲ್ಲಿ ಗಿಡಗಂಟೆಗಳು ಬೆಳೆದಿದ್ದು, ಅದನ್ನು ಶನಿವಾರ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೆರವುಗೊಳಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಬೈಪಾಸ್ ರಸ್ತೆಯಲ್ಲಿ ಕಳ್ಳಿ, ಮುಳ್ಳು ಹಾಗೂ ವಿವಿಧ ಗಿಡಗಂಟೆಗಳು ಬೆಳೆದಿದ್ದು ತಿರುವಿನಲ್ಲಿ ಬರುವ ವಾಹನಗಳಿಗೆ ಮುಂದಿನಿಂದ ಬರುವ ವಾಹನ ಕಾಣುತ್ತಿರಲಿಲ್ಲ. ನಗರಸಭೆಯವರಿಗಾಗಿ ಕಾಯದೇ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತ್ಯಾಜ್ಯ ಹಾಗೂ ಅಡ್ಡವಾಗಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಿದರು.

ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಿಡಗಂಟೆಗಳನ್ನು ತೆರವುಗೊಳಿಸಿದ ನಂತರದ ಚಿತ್ರ
ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಿಡಗಂಟೆಗಳನ್ನು ತೆರವುಗೊಳಿಸಿದ ನಂತರದ ಚಿತ್ರ
ಈ ತಿರುವಿನ ಸಮೀಪದಲ್ಲೇ ಇರುವ ಶಾರದಾ ವಿದ್ಯಾಸಂಸ್ಥೆಗೆ ವಾಹನದಲ್ಲಿ ಬರುವ ಪೋಷಕರು ಹಾಗೂ ಶಿಕ್ಷಕರು ಈ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರು. ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಕುರಿತಂತೆ ಕಾರ್ಯಕ್ರಮವೊಂದನ್ನು ಶಾಲೆಯಲ್ಲಿ ನಡೆಸಿ, ಕೇವಲ ಭಾಷಣವನ್ನು ಕೇಳಿದರೆ ಸಾಲದು, ಕಾರ್ಯಪ್ರವೃತ್ತರಾಗೋಣ. ನಮ್ಮ ಸುತ್ತಲಿನ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳೋಣ. ಇತರರಿಗೂ ಸಹಾಯವನ್ನು ಮಾಡೋಣ ಎಂದು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಶಾಲೆಯ ಹತ್ತಿರ ಗುಂಡಿಯೊಂದನ್ನು ಮುಚ್ಚಿ, ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿ ನಂತರ ಬೈಪಾಸ್ ರಸ್ತೆಯ ಅಕ್ಕಪಕ್ಕ ಬೆಳೆದಿದ್ದ ಗಿಡಗಂಟೆಗಳನ್ನು ತೆಗೆದು ವಾಹನ ಸವಾರರಿಗೆ ಆಗುತ್ತಿದ್ದ ಅನಾನುಕೂಲತೆಯನ್ನು ಸರಿಪಡಿಸಿದರು.
ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಮುನಿರತ್ನಂ, ಕಾರ್ಯದರ್ಶಿ ಎ.ಎಂ.ಶ್ರೀಕಾಂತ್, ಮುಖ್ಯಶಿಕ್ಷಕರಾದ ವೆಂಕಟರಮಣಪ್ಪ, ಈಶ್ವರ್ಸಿಂಗ್, ಶಿಕ್ಷಕರಾದ ರಾಘವೇಂದ್ರ, ರಾಜೇಶ್, ಮುರಳಿ, ಮಂಜುನಾಥ್, ಮುನಿಯಪ್ಪ, ರಮೇಶ್, ಶಾಂತ, ಹೇಮಾವತಿ ಮತ್ತಿತರರು ಹಾಜರಿದ್ದರು.