Home News ಬಾಲ್ಯವಿವಾಹ ತಡೆಯಬೇಕು – ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ

ಬಾಲ್ಯವಿವಾಹ ತಡೆಯಬೇಕು – ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ

0

ಸಣ್ಣ ವಯಸ್ಸಿನಲ್ಲೆ ಮಕ್ಕಳಿಗೆ ಮದುವೆ ಮಾಡುವುದರಿಂದ ಅವರ ಜೀವನವನ್ನು ಕತ್ತಲೆಯ ಕೂಪಕ್ಕೆ ದೂಡಿದಂತಾಗುತ್ತದೆ ಮತ್ತು ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯತಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಉತ್ತಮವಾದ ಶಿಕ್ಷಣವನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮವಾಗಿ ವ್ಯಕ್ತಿಗಳಾಗಿ ಬೆಳೆಯಬೇಕಾದಂತಹ ಮಕ್ಕಳಿಗೆ ಬಾಲ್ಯದಲ್ಲಿಯೆ ಮದುವೆಯೆಂಬ ಬಂಧನಕ್ಕೆ ಒಳಪಡಿಸುವುದು ಮಾನಸಿಕ, ದೈಹಿಕ, ಸದೃಢತೆಗೆ ಸಮಸ್ಯೆಯುಂಟಾಗುತ್ತದೆ. ಬಾಲ್ಯದಲ್ಲಿಯೆ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುವಂತಹ ಚಾಕಚಕ್ಯತೆ ಮಕ್ಕಳಲ್ಲಿ ಇರುವುದಿಲ್ಲ. ಚಿಕ್ಕವಯಸಿನಲ್ಲೆ ಮಕ್ಕಳಾದರೂ ಅವರಿಗೆ ಬಹಳಷ್ಟು ದೈಹಿಕ ನ್ಯೂನ್ಯತೆಗಳು ಕಾಣಿಸಿಕೊಂಡು ಪೌಷ್ಠಿಕಾಂಶದ ಕೊರತೆಯಿಂದಾಗಿ ಸಾವನ್ನಪ್ಪುವಂತಹ ಲಕ್ಷಣಗಳು ಹೇರಳವಾಗಿರುವುದರಿಂದ ಪೋಷಕರು ಮಕ್ಕಳ ಮದುವೆಯ ವಿಚಾರಗಳಲ್ಲಿ ಜಾಗ್ರತೆ ವಹಿಸಬೇಕು ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ ಮಾತನಾಡಿ, ಎಳೆಯ ವಯಸ್ಸಿಗೆ ಮಕ್ಕಳಿಗೆ ಬಲವಂತದ ಮದುವೆ ಮಾಡಿದರೆ ಕಠಿಣವಾದ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ತಾಲ್ಲೂಕಿನಲ್ಲಿ ಹಲವಾರು ಕಡೆಗಳಲ್ಲಿ ಇಂತಹ ವಿವಾಹಗಳು ನಡೆಯುತ್ತಿವೆ. ಇಂತಹ ಘಟನೆಗಳು ನಡೆಯದಂತೆ ಸಮಾಜದ ಎಲ್ಲಾ ವರ್ಗದ ಜನತೆ ಜಾಗೃತರಾಗಬೇಕು. ಕಲ್ಯಾಣಮಂಟಪಗಳನ್ನು ಬಾಡಿಗೆಗೆ ನೀಡುವ ಮುನ್ನಾ ಮಾಲೀಕರು ಮದುವೆಯಾಗುವಂತಹ ಗಂಡು ಮತ್ತು ಹೆಣ್ಣು ಮಕ್ಕಳ ವಯಸ್ಸಿನ ಬಗ್ಗೆ ಸೂಕ್ತವಾದ ದಾಖಲೆಗಳನ್ನು ಪಡೆದುಕೊಳ್ಳಬೇಕು. ಮದುವೆಗಳನ್ನು ಮಾಡಿಸುವಂತಹ ಪುರೋಹಿತರೂ ಕೂಡಾ ವಯಸ್ಸುಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮಸೀದಿಗಳು, ಚರ್ಚ್ಗಳಲ್ಲಿಯೂ ಕೂಡಾ ಮದುವೆಗಳನ್ನು ಮಾಡಿಸುವ ಮುನ್ನಾ ವಯೋಮಿತಿಯ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದರು.
ಸಿ.ಡಿ.ಪಿ.ಓ ಲಕ್ಷ್ಮೀದೇವಮ್ಮ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಶಿಕ್ಷಣ ಇಲಾಖೆಯ ಶ್ರೀನಿವಾಸ್, ಸುಷ್ಮಾ, ಸಿ.ಡಿ.ಪಿ.ಓ.ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕೆ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.