ರೇಷ್ಮೆ ಕೃಷಿಕರು, ನೂಲು ಬಿಚ್ಚಾಣಿಕೆದಾರರು, ಚಾಕಿ ಸಾಕಾಣಿಕೆದಾರರು, ರೇಷ್ಮೆ ಮೊಟ್ಟೆ ತಯಾರಕರು ಮತ್ತು ರೇಷ್ಮೆ ನೇಕಾರರ ಸಮಸ್ಯೆಗಳ ಅಧ್ಯಯನಕ್ಕೆ ಧಾರಾವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಎಚ್.ಬಸವರಾಜು ರವರ ಅಧ್ಯಕ್ಷತೆಯಲ್ಲಿ ೮ ಸದಸ್ಯರನ್ನೊಳಗೊಂಡ ಸಮಿತಿಯು ಮಂಗಳವಾರ ಆಗಮಿಸಲಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ನಡೆಯಲಿರುವ ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲೆಯಲ್ಲಿನ ರೇಷ್ಮೆ ಕೃಷಿಕರ ಸಮಸ್ಯೆಗಳು ಸೇರಿದಂತೆ ಪ್ರಮುಖವಾಗಿ ಮಿಶ್ರತಳಿ ಗೂಡಿನ ಉತ್ಪಾದನಾ ವೆಚ್ಚ ಇತರೆ ಎಲ್ಲಾ ಅಂಶಗಳನ್ನು ಸಮಿತಿಯ ಗಮನಕ್ಕೆ ತರಲು ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ವತಿಯಿಂದ ಸಂಕ್ಷಿಪ್ತ ವಿವರವುಳ್ಳ ವರದಿಯನ್ನು ತಯಾರು ಮಾಡಿಕೊಳ್ಳಲಾಗಿದೆ.
ಪ್ರಗತಿಪರ ರೇಷ್ಮೆ ಬೆಳೆಗಾರರೆಲ್ಲ ಸೇರಿ ಶನಿವಾರ ಮತ್ತು ಭಾನುವಾರ ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕರ ಕಚೇರಿಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅನುಭವದ ಆಧಾರದ ಮೇಲೆ ಉತ್ಪಾದನಾ ವೆಚ್ಚವನ್ನು ನಿಗಧಿ ಮಾಡಿಕೊಳ್ಳಲಾಗಿದೆ. ಈ ವರದಿಯಲ್ಲಿ ಒಂದು ಕೆ.ಜಿ. ಮಿಶ್ರತಳಿ ರೇಷ್ಮೆಗೂಡಿನ ಉತ್ಪಾದನಾ ವೆಚ್ಚವು ಪ್ರಚಲಿತ ಸ್ಥಿತಿಗತಿಗಳಿಗನುಗುಣವಾಗಿ ೩೬೪- ರೂ ಆಗಿದೆ.
ಒಂದು ಎಕರೆ ಹಿಪ್ಪುನೇರಳೆ ನಾಟಿ ಮಾಡುವ ಪ್ರದೇಶಕ್ಕಾನುಗುಣವಾಗಿ ವಿವರವಾಗಿ ಲೆಕ್ಕ ಹಾಕಿ ೧೦೦ ಮೊಟ್ಟೆಗೆ ೭೫ ಕೆ.ಜಿ. ಸರಾಸರಿ ಇಳುವರಿಯ ಆಧಾರದಲ್ಲಿ ೧೦ ವರ್ಷಕ್ಕೆ ಮೂಲ ಬಂಡವಾಳವಾಗಿ ತೆಗೆದುಕೊಂಡಾಗ ಒಂದು ಕೆ.ಜಿ.ಗೆ ರೂ. ೯.೩೪ ಪೈಸೆ, ಹಿಪ್ಪುನೇರಳೆ ತೋಟ ನಿರ್ವಹಣೆಗೆ ಪ್ರತಿ ಕೆ.ಜಿ. ರೂ. ೮೯.೮೧ ಪೈಸೆ, ಹುಳು ಸಾಕಾಣಿಕೆಗೆ ಸಂಬಂಧಿಸಿದಂತೆ ರೂ. ೨೧೨.೯೩ ಪೈಸೆ, ಕೊಳವೆ ಬಾವಿಯ ವೆಚ್ಚವನ್ನು ಸರಾಸರಿ ೧೦೦೦ ಅಡಿಗೆ ಲೆಕ್ಕ ಹಾಕಿ ಇದರ ವೆಚ್ಚವು ಪ್ರತಿ ಕೆ.ಜಿ.ಗೆ ರೂ. ೨೩.೮೧ ಪೈಸೆ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ೩೦ ವರ್ಷದ ಆಯಸ್ಸಿಗೆ ಅನುಗುಣವಾಗಿ ಪ್ರತಿ ಕೆ.ಜಿ.ಗೆ ರೂ. ೨೮.೪೪ ಪೈಸೆ ಒಟ್ಟು ಮೊತ್ತ ಪ್ರತಿ ಕೆ.ಜಿ.ಗೆ ರೂ. ೩೬೪ ಆಗುತ್ತದೆ.
ದ್ವಿತಳಿ ರೇಷ್ಮೆ ಬೆಳೆಯುವ ಬೆಳೆಗಾರರಿಗೆ ಅತಿ ಹೆಚ್ಚಿನ ಕಾಳಜಿ ಮತ್ತು ಹೆಚ್ಚಿನ ಸೋಂಕು ನಿವಾರಕಗಳನ್ನು ಬಳಸಿ ರಾಮನಗರ ಮಾರುಕಟ್ಟೆಗೆ ಹೋಗಬೇಕಾದ ಕಾರಣದಿಂದಾಗಿ ಗೂಡಿನ ಉತ್ಪಾದನಾ ವೆಚ್ಚವು ೩೬೪ ರೂಗಳಿಗಿಂತಲೂ ಹೆಚ್ಚಾಗುವುದೆಂದು ಅಂದಾಜಿಸಲಾಗಿದೆ.
‘ಇತ್ತೀಚಿಗೆ ರೇಷ್ಮೆಗೂಡಿನ ಬೆಲೆಯು ತೀವ್ರವಾಗಿ ಕುಸಿದಿದ್ದು, ೯೦ರ ದಶಕದಲ್ಲಿ ಇದ್ದ ರೇಷ್ಮೆ ಗೂಡಿನ ಧರಕ್ಕಿಂತಲೂ ಕಡಿಮೆ ಬೆಲೆಗೆ ರೇಷ್ಮೆ ಗೂಡನ್ನು ಮಾರಾಟ ಮಾಡುತ್ತಿರುವುದರಿಂದ ರೈತರು ತೀವ್ರ ನಷ್ಟಕ್ಕೊಳಗಾಗುತ್ತಿದ್ದಾರೆ. ಇಂದು ರಸಗೊಬ್ಬರ ಬೆಲೆ, ಕೂಲಿಯ ಪ್ರಮಾಣ, ಸಾಗಾಣಿಕೆ ವೆಚ್ಚ ಸುಮಾರು ೧೦ ಪಟ್ಟು ಹೆಚ್ಚಿದ್ದರೂ ಸಹ ೨೦ ವರ್ಷಗಳ ಹಿಂದಿನ ಧರದಲ್ಲೇ ರೇಷ್ಮೆಗೂಡನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿರುವುದು ರೇಷ್ಮೆ ಕೃಷಿಕರ ದುರಾದೃಷ್ಟ. ಡಾ.ಸ್ವಾಮಿನಾಥನ್ ವರದಿಯ ಆಧಾರದ ಪ್ರಕಾರ ಉತ್ಪಾದನಾ ವೆಚ್ಚದ ಶೇ. ೫೦ ರಷ್ಟನ್ನು ರೈತರಿಗೆ ಲಾಭಾಂಶವಾಗಿ ನೀಡಬೇಕೆಂಬ ನಿಯಮದಂತೆ ಸರ್ಕಾರವು ಕನಿಷ್ಟ ಧರವನ್ನು ನಿಗಧಿಪಡಿಸಿದರೆ ರೇಷ್ಮೆ ಉದ್ಯಮ ಉಳಿಯಲು ಸಾಧ್ಯ’ ಎಂದು ರೇಷ್ಮೆ ಕೃಷಿಕರು ತಿಳಿಸಿದ್ದಾರೆ.
ಈ ಸಭೆಯಲ್ಲಿ ಪ್ರಗತಿಪರ ಬೆಳೆಗಾರರು ಹಾಗೂ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ವೇದಿಕೆಯ ಉಪಾಧ್ಯಕ್ಷ ಮಳ್ಳೂರು ಹರೀಶ್, ಹಿತ್ತಲಹಳ್ಳಿ ಗೋಪಾಲಗೌಡ, ಚಿಂತಾಮಣಿ ಮಲ್ಲಿಕಾರ್ಜುನ ರೆಡ್ಡಿ, ಅಬ್ಲೂಡು ಆರ್.ದೇವರಾಜು, ನಾರಾಯಣದಾಸರಹಳ್ಳಿ ಕೃಷ್ಣಪ್ಪ, ಹೊಸಪೇಟೆ ಜಯಣ್ಣ, ವೀರಾಪುರ ಮುನಿನಂಜಪ್ಪ, ಭಕ್ತರಹಳ್ಳಿ ಲಕ್ಷ್ಮೀನಾರಾಯಣ್, ರಾಮಚಂದ್ರ ಮತ್ತಿತರರು ಹಾಜರಿದ್ದರು.