ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಜೆಡಿಎಸ್ ಸೋತಿಲ್ಲ, ಜನರ ಮನಸ್ಸಿನಲ್ಲಿ ಗೆದ್ದಿದೆ. ಪಕ್ಷವನ್ನು ಸಂಘಟಿಸುವುದರಲ್ಲಿ ಮುಂದೆ ಎರಡು ಪಟ್ಟು ಶ್ರಮ ಹಾಕುತ್ತೇನೆ. ಕ್ಷೇತ್ರದಲ್ಲಿ ಎಲ್ಲಿ ಸಮಸ್ಯೆ ಕಂಡುಬಂದರೂ ಶ್ರಮಿಸುತ್ತೇನೆ. ಶಕ್ತಿ ಮೀರಿ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.
ಹಾಲಿ ಶಾಸಕ ಹಾಗೂ ಮಾಜಿ ಸಚಿವರನ್ನು ಎದುರಿಸಿ ನಡೆಸಿದ ಚುನಾವಣೆಯಲ್ಲಿ ಒಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತನಾದ ನನಗೆ ಮತದಾರ ತಂದೆತಾಯಿಯರು 66,531 ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಜನರ ಋಣ ದೊಡ್ಡದು. ಅವರಿಗೆ ಮಾತಿನಲ್ಲಿ ಕೃತಜ್ಞತೆಯನ್ನು ಹೇಳಿದರೆ ಸಾಲದು. ನನ್ನ ಜೀವನ ಪೂರ್ತಿ ಜನರ ಸೇವೆ ಮಾಡುತ್ತೇನೆ. ಪ್ರಾಣ ಇರುವ ತನಕ ಕ್ಷೇತ್ರದ ಜನರ ಹಿಂದೆ ಇರುತ್ತೇನೆ. ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಗೆಲ್ಲಲು ಶ್ರಮಿಸುತ್ತೇನೆ ಎಂದು ಹೇಳಿದರು.
ಅಧಿಕಾರಕ್ಕಾಗಿ, ದುಡ್ಡು ಮಾಡಲಿಕ್ಕಾಗಿ ನಾನು ಚುನಾವಣೆಗೆ ನಿಲ್ಲಲಿಲ್ಲ. ಜನರಿಗೆ ಮೋಸ ತೊಂದರೆ ಆಗುವುದನ್ನು ತಪ್ಪಿಸಲು, ಕ್ಷೇತ್ರದ ಅಭಿವೃದ್ಧಿ ಮಾಡಲು, ನಿಷ್ಠಾವಂತ ಕಾರ್ಯಕರ್ತರ ಬೆನ್ನೆಲುಬಾಗಿ ನಿಲ್ಲಲು ಹಾಗೂ ಜೆಡಿಎಸ್ ಬಲಿಷ್ಠಗೊಳಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಕುಮಾರಣ್ಣನ ಕೈ ಬಲಪಡಿಸಬೇಕು ಹಾಗೂ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಆಶಯವಾಗಿತ್ತು. ಈಗಲೂ ಕುಮಾರಣ್ಣ ಮುಖ್ಯಮಂತ್ರಿ ಆಗುವ ಎಲ್ಲ ಲಕ್ಷಣಗಳೂ ಕಂಡುಬಂದಿದ್ದು ನಮಗೆಲ್ಲ ಸಂತೋಷ ತಂದಿದೆ ಎಂದರು.
ಜೆಡಿಎಸ್‌ನಿಂದ ಅಧಿಕಾರವನ್ನು ಅನುಭವಿಸಿದ್ದ ಎಂ.ರಾಜಣ್ಣನವರು ಪಕ್ಷಕ್ಕೆ, ಪಕ್ಷದ ಕಾರ್ಯಕರ್ತರಿಗೆ ಮೋಸ ಮಾಡಿ, ಕಾಂಗ್ರೆಸ್‌ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಕ್ಷೇತ್ರದಲ್ಲಿ ಜೆಡಿಎಸ್ ಸೋಲಲು ಕಾರಣವಾಯಿತು. ತಾಯಿಯಂತಹ ಪಕ್ಷಕ್ಕೆ ದ್ರೋಹ ಮಾಡಿ ಆತ್ಮಾಘಾತುಕ ಕೆಲಸ ಮಾಡಿದ್ದಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಕ್ಷೇತ್ರವನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿಕೊಟ್ಟ ಈ ಮಹಾನುಭಾವರು ಇಡೀ ರಾಜ್ಯದಲ್ಲಿ ಠೇವಣಿ ಕಳೆದುಕೊಂಡ ಹಾಲಿ ಶಾಸಕ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಎಂ.ರಾಜಣ್ಣ ಕಳೆದ ಚುನಾವಣೆಯಲ್ಲಿ ತಮ್ಮ ಮಾವ ದಿವಂಗತ ಎಸ್.ಮುನಿಶಾಮಪ್ಪರ ಫೋಟೊ ಹಿಡಿದು ಮತ ಯಾಚಿಸಿದರು. ಕಳೆದ ಹದಿನೈದು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರ ತಂದೆ ತೀರಿಕೊಂಡರೆ, ಅದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಮುಂದಾದರು. ಅದು ಫಲಿಸದಿದ್ದಾಗ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮತದಾನದ ಹಿಂದಿನ ರಾತ್ರಿ ಹೃದಯಾಘಾತ ಆಗಿದೆ ಎಂದು ಸುಳ್ಳು ವದಂತಿ ಹಬ್ಬಿಸಿ, ತಮ್ಮನ್ನು ನಂಬಿದ್ದ ಅನೇಕ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಸಂದೇಶ ರವಾನಿಸಿದ್ದರಿಂದ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಸೋಲು ಅನುಭವಿಸಬೇಕಾಯಿತು ಎಂದರು.
ಚುನಾವಣೆಯಲ್ಲಿ ಸೋಲು, ಗೆಲುವು ಸಹಜ, ಸೋಲನುಭವಿಸಿದಾಗ ಅಳುವುದು, ನಾಟಕ ಆಡುವುದು ಕೇವಲ ರಾಜಣ್ಣನಿಗೆ ಮಾತ್ರ ಬರುತ್ತದೆ. ಆದರೆ ನಾವು ಅಳುವುದು ನಮ್ಮ ಕಾರ್ಯಕರ್ತರು ತೊಂದರೆಯಲ್ಲಿದ್ದಾಗ ಮಾತ್ರ, ಇದೀಗ ಚುನಾವಣೆಯಲ್ಲಿ ಸೋಲನುಭವಿಸಿದ್ದೇವಾದರೂ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಶಿಡ್ಲಘಟ್ಟಕ್ಕೆ ಬಂದು ಜೆಡಿಎಸ್‌ಗೆ ಮತ ನೀಡಿದರೆ ಬಿಜೆಪಿಗೆ ಕೊಟ್ಟಂತೆ ಎಂದು ಅಪಪ್ರಚಾರ ಮಾಡಿ ಜನರಿಗೆ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದರು. ಜನರಿಗೆ ತಪ್ಪು ಸಂದೇಶ ನೀಡಿದ್ದ ಅವರೇ ಈ ದಿನ ನಮ್ಮ ವರಿಷ್ಠರ ಮನೆ ಬಾಗಿಲಿನಲ್ಲಿ ನಿಂತಿರುವುದು ವಿಪರ್ಯಾಸ. ಇವರ ದ್ವಂದ್ವ ನೀತಿಯನ್ನು ಜನರು ಗಮನಿಸಬೇಕು. ಸುಳ್ಳು ಹೇಳಿ ರಾಜಕಾರಣ ಮಾಡುವರನ್ನು ನಂಬಬಾರದು, ಅವರ ಮಾತಿಗೆ ಕಿವಿಗೊಡಬಾರದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಬಿ.ಎನ್.ರವಿಕುಮಾರ್ ಶಾಸಕರಾಗುವುದನ್ನು ತಪ್ಪಿಸುವಲ್ಲಿ ಮಾಜಿ ಶಾಸಕ ಎಂ.ರಾಜಣ್ಣ ಗೆದ್ದಿರಬಹುದು. ಆದರೆ ಕ್ಷೇತ್ರದ ಸುಮಾರು ೬೬,೫೩೧ ಮತದಾರರ ಪ್ರೀತಿ, ವಿಶ್ವಾಸ ಗಳಿಸಿಕೊಂಡಿರುವುದನ್ನು ತಪ್ಪಿಸಲಾಗಿಲ್ಲ. ಈ ಚುನಾವಣೆಯಲ್ಲಿ ತಾವು ನಡೆದುಕೊಂಡ ರೀತಿ ನೀತಿಗಳ ಬಗ್ಗೆ ಎಂ.ರಾಜಣ್ಣ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅಧಿಕಾರ ನೀಡಿದ ಪಕ್ಷಕ್ಕೆ ಮೋಸ ಮಾಡಿದ ನಿಮ್ಮನ್ನು ಈ ಹಿಂದೆ ಇದೇ ಮುಖಂಡರೂ, ಕಾರ್ಯಕರ್ತರು ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಆದರೆ ತಮ್ಮ ನಿಷ್ಠೆ ತಮ್ಮ ವಿರೋಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರ ತೋರಿಸಿದ್ದೀರಿ. ಈ ಬಗ್ಗೆ ಕ್ಷೇತ್ರದ ಜನತೆ ಮುಂದೆ ಉತ್ತರಿಸಬೇಕಾಗುತ್ತದೆ ಎಂದರು. ಇಡೀ ರಾಜ್ಯದಲ್ಲಿ ಹಾಲಿ ಶಾಸಕರೊಬ್ಬರು ಕೇವಲ ೮,೪೭೧ ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನಕ್ಕಿಳಿದಿರುವುದು ನಿಮ್ಮ ವೈಯಕ್ತಿಕ ವರ್ಚಸ್ಸು ಏನು ಎಂಬುದನ್ನು ತಿಳಿಸುತ್ತದೆ ಎಂದರು.
ಕಾಂಗ್ರೆಸ್ ತಮ್ಮ ಕುತಂತ್ರದಿಂದ ಗೆದ್ದಿರಬಹುದು. ಜೆಡಿಎಸ್ ಕಾರ್ಯಕರ್ತರು ಎದೆಗುಂದಬಾರದು. ಪಕ್ಷವು ತನ್ನ ಕಾರ್ಯಕರ್ತರ ಬೆನ್ನೆಲುಬಾಗಿರುತ್ತದೆ. ಹೆಚ್ಚು ಒತ್ತು ಕೊಟ್ಟು ಪಕ್ಷವನ್ನು ಬಲಿಷ್ಠಗೊಳಿಸೋಣ. ರವಿಯಣ್ಣ ಜಾತ್ಯತೀತ ವ್ಯಕ್ತಿ. ಜೆಡಿಎಸ್ ಜಾತ್ಯತೀತ ಪಕ್ಷ. ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷದ ಹಿನ್ನೆಲೆ ನಮ್ಮದು.
ರಾಜಣ್ಣ ಅವರ ಕುತಂತ್ರದಿಂದ ಜೆಡಿಎಸ್‌ಗೆ ಸೋಲಾಯಿತು. ಜೆಡಿಎಸ್ ಕಾರ್ಯಕರ್ತರಿಗೆ ಮೋಸ ಮಾಡಿದ ಅವರು ಹೆಣ್ಣು ಕೊಟ್ಟ ಮಾವನಿಗೂ ಮೋಸ ಮಾಡಿದರು, ಅಧಿಕಾರ ಕೊಟ್ಟ ಪಕ್ಷಕ್ಕೂ ಮೋಸ ಮಾಡಿದರು ಮತ್ತು ಪಕ್ಷದ ವರಿಷ್ಠರಿಗೂ ಮೋಸ ಮಾಡಿದರು. ಅವರ ಮೋಸ ಅವರನ್ನು ತಿನ್ನದೇ ಬಿಡದು ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ.ಬಿ.ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮುಖಂಡರಾದ ತಿಮ್ಮನಾಯಕನಹಳ್ಳಿ ರಮೇಶ್, ಮುಗಲಡಿಪಿ ನಂಜಪ್ಪ, ಗಂಜಿಗುಂಟೆ ಮೂರ್ತಿ ಹಾಜರಿದ್ದರು.