ಮಳೆಯ ಅಭಾವದಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದೆ. ಆದ್ದರಿಂದ ರೈತರು ನಷ್ಟ ಹೊಂದುವುದನ್ನು ತಡೆಯಲು ಪ್ರತಿ ಲೀಟರ್ ಹಾಲಿಗೆ ಕನಿಷ್ಟ ೨೫ ರೂಪಾಯಿಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಹೇಳಿದರು.
ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ ಮುನಿಯಪ್ಪ, ತಾಲ್ಲೂಕಿನ ಸುಮಾರು ೧೯೦ ಸಹಕಾರ ಸಂಘಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯದರ್ಶಿಗಳ ಕುಟುಂಬಗಳಿಗೆ ನೆರವಾಗಲು, ಈಗಾಗಲೇ ಕೋಲಾರದ ಒಕ್ಕೂಟದ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಕಾರ್ಯದರ್ಶಿಗಳು ಅಕಾಲ ಮರಣಕ್ಕೆ ತುತ್ತಾದರೆ, ೧ ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಲು ಉದ್ದೇಶಿಸಲಾಗಿದೆ, ಎಸ್.ಎಸ್.ಎಲ್.ಸಿ.,ಪಿ.ಯು.ಸಿ ಮತ್ತು ಪದವಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವಂತಹ ಕಾರ್ಯದರ್ಶಿಗಳ ಮಕ್ಕಳಿಗೆ ಪ್ರೋತ್ಸಾಹ ಮಾಡುವಂತಹ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈಗ ತೀವ್ರ ಮಳೆಯ ಕೊರತೆಯಿಂದಾಗಿ ಹಾಲು ಉತ್ಪಾದಕರಿಗೆ ನಷ್ಟವುಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೨೫ ರೂಪಾಯಿಗಳು ನೀಡಲು ಸಭೆಯಲ್ಲಿ ತೀರ್ಮಾನ ಮಾಡಿ ಠರಾವು ಹೊರಡಿಸಲಾಗುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಕಾರ್ಯದರ್ಶಿಗಳು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು ಎಂದರು.
ಶಿಡ್ಲಘಟ್ಟ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ ಮಾತನಾಡಿ, ರೈತರು ರಾಸುಗಳಿಗೆ ವಿಮೆಗಳನ್ನು ಮಾಡಿಸಿಕೊಳ್ಳಬೇಕು, ಈಗಾಗಲೇ ಈ ಸಾಲಿನಲ್ಲಿ ೬೦೦೦ ರಾಸುಗಳಿಗೆ ವಿಮೆ ಮಾಡಿಸಲಾಗಿದೆ, ರೈತರು ೪೦೦ ರೂಪಾಯಿಗಳು ಪಾವತಿಸಬೇಕು, ಒಕ್ಕೂಟ ೪೦೦ ರೂಪಾಯಿಗಳನ್ನು ಭರಿಸುತ್ತದೆ, ಇದರಿಂದ ರಾಸುಗಳು ಮರಣಹೊಂದಿದಾಗ ರೈತರಿಗೆ ಅನುಕೂಲವಾಗಲಿದೆ. ಕಾರ್ಯದರ್ಶಿಗಳು ಹೆಚ್ಚು ಆಸಕ್ತಿ ವಹಿಸಿ ರಾಸುಗಳಿಗೆ ವಿಮಾ ಸೌಲಭ್ಯಗಳನ್ನು ಮಾಡಿಸಿಕೊಡಲು ಸಹಕಾರಿಗಳಾಗಬೇಕು ಎಂದರು.
ಇದೇ ಸಂಧರ್ಭದಲ್ಲಿ ಮೃತ ಕೃಷ್ಣಪ್ಪ ಅವರ ಕುಟುಂಬಕ್ಕೆ ಸಹಾಯಧನ ಹಾಗೂ ಕಾಯಿಬಾಯಿ ರೋಗದಿಂದ ಸಾವನ್ನಪ್ಪಿರುವ ರಾಸುಗಳ ಮಾಲೀಕರಿಗೆ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗೋಪಾಲರಾವ್, ಚಂದ್ರಶೇಖರ್, ಆಂಜಿನಪ್ಪ, ಕುಮ್ಮಯ್ಯ, ಕೆ.ಬಿ.ಎನ್.ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.