ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಅತ್ಯಂತ ಪುರಾತನ ಕಲ್ಯಾಣಿ ಶಾಮಣ್ಣ ಬಾವಿಯನ್ನು ಯುವಬ್ರಿಗೇಡ್ನ ತಾಲ್ಲೂಕು ಘಟಕದ ಸದಸ್ಯರು ಚೊಕ್ಕಟಗೊಳಿಸುತ್ತಿದ್ದಾರೆ.
ಸುಮಾರು 400 ವರ್ಷಗಳಷ್ಟು ಹಳೆಯದಾದ ಶಾಮಣ್ಣ ಬಾವಿಯನ್ನು ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ನಿರ್ಮಿಸಲಾಗಿದೆ. ಹಿಂದೆ ಸದಾಕಾಲ ನೀರಿರುತ್ತಿದ್ದ ಶಾಮಣ್ಣ ಬಾವಿಯು ಪಟ್ಟಣದ ಯುವಕರ ಈಜು ಕಲಿಯುವ ತಾಣವಾಗಿತ್ತು.
ಆದರೆ ನೀರಿನ ಸಮಸ್ಯೆ ಪ್ರಾರಂಭವಾದಂತೆ ಶಾಮಣ್ಣ ಬಾವಿಯಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ನಿಲ್ಲುವಂತಾಯಿತು. ಗೌಡನ ಕೆರೆಯಲ್ಲಿ ಕಳೆ ಗಿಡ ತುಂಬಿಕೊಂಡು ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯ ನೀರು ನಿಲ್ಲುವಂತಾದ ಮೇಲೆ ಅಲ್ಲಿಂದ ಶಾಮಣ್ಣ ಬಾವಿಗೆ ನೀರು ಬರದೆ ಸೊರಗತೊಡಗಿತು. ಕಲ್ಲು ಚಪ್ಪಡಿಗಳ ನಡುವೆ ಕಳೆಗಿಡಗಳು ಬೆಳೆಯತೊಡಗಿದವು. ಕಸ ತ್ಯಾಜ್ಯ ತುಂಬಿಕೊಂಡು ಬಾವಿಯು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳತೊಡಗಿತು. ಆಗಾಗ ಕೆಲವು ಹಿರಿಯರು ಮತ್ತು ಪುರಸಭೆಯಿಂದ ಶಾಮಣ್ಣ ಬಾವಿಯನ್ನು ಶುಚಿಗೊಳಿಸಿದರೂ, ಕಳೆಗಿಡ ವರ್ಷಕ್ಕೊಮ್ಮೆ ಬೆಳೆದು ಕಲ್ಲುಚಪ್ಪಡಿಗಳನ್ನು ಪಲ್ಲಟಗೊಳಿಸಿದ್ದವು.
ಕಳೆದ ಮೂರು ವರ್ಷಗಳ ಹಿಂದೆ ಶಾಮಣ್ಣಬಾವಿ ದುರಸ್ತಿ ಕಾರ್ಯ ನಡೆಯಿತು. ಪುರಸಭೆಯಿಂದ 2.5 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ, ಕಲ್ಲಿನ ಮಧ್ಯೆ ಇದ್ದ ಗಿಡ ಗೆಂಡೆಗಳನ್ನು ಬೇರು ಸಮೇತವಾಗಿ ತೆಗೆದು ಕಲ್ಲುಗಳಿಗೆ ಸಂದು ಗಾರೆ ಮಾಡಿದ್ದರು. ಉಲ್ಲೂರು ಪೇಟೆಯಿಂದ ಹೋಗುವ ವಾಹನಗಳು ಶಾಮಣ್ಣ ಬಾವಿಯ ಬಳಿಗೆ ಹೋಗಿ ಅಪಘಾತವಾಗದಂತೆ 48 ಮೀಟರ್ ಉದ್ದ ಹಾಗೂ ಮೂರುವರೆ ಅಡಿ ಎತ್ತರದ ತಡೆಗೋಡೆ ನಿರ್ಮಾಣ ಕೂಡ ನಡೆದಿತ್ತು.
ಪುನಃ ಗಿಡ ಗೆಂಡೆಗಳು ಬೆಳೆದು ಬಾವಿಯೇ ಕಾಣದಂತೆ ಆವರಿಸಿದ್ದುದನ್ನು ಕಳೆದ ಎರಡು ದಿನಗಳಿಂದ ಯುವಬ್ರಿಗೇಡ್ನ ತಾಲ್ಲೂಕು ಘಟಕದ ಸದಸ್ಯರು ಶುಚಿಗೊಳಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಈ ಕಾರ್ಯ ನಡೆಸಬೇಕೆಂದಿದ್ದ ಸದಸ್ಯರು ಎರಡು ದಿನಗಳಲ್ಲಿ ಮುಗಿಯುವುದಿಲ್ಲವಾದ್ದರಿಂದ ಕಲ್ಯಾಣಿ ಶುಚಿಯಾಗುವವರೆಗೂ ಕೆಲಸ ನಿಲ್ಲಿಸುವುದಿಲ್ಲ ಎನ್ನುತ್ತಾರೆ. ಕಲ್ಯಾಣಿಯ ಮಧ್ಯಭಾಗದಲ್ಲಿರುವ ಗಂಗಮ್ಮ ದೇವಿಯ ಮೂರ್ತಿಗೆ ಅಭಿಷೇಕ, ಪೂಜೆ ಸಲ್ಲಿಸಿದ ಯುವಬ್ರಿಗೇಡ್ನ ಸದಸ್ಯರು ಆಳವಾಗಿ ಬೇರೂರಿರುವ ಗಿಡ, ಮುಳ್ಳುಗಳನ್ನು ತೆಗೆಯುತ್ತಾ ನೀರು ನಿಲ್ಲುವೆಡೆ ತುಂಬಿರುವ ತ್ಯಾಜ್ಯವನ್ನೂ ಹೊರಸಾಗಿಸುತ್ತಿದ್ದಾರೆ.
ಯುವಬ್ರಿಗೇಡ್ನ ತಾಲ್ಲೂಕು ಘಟಕದ ಸದಸ್ಯರಾದ ಎಸ್.ಪ್ರಸಾದ್, ಬಿ.ಶ್ರೀಕಾಂತ್, ಕಿರಣ್, ಮುರಳಿ, ಪ್ರವೀಣ್, ನಾಗೇಶ್, ವರುಣ್, ಅಶ್ವತ್ಥ್, ಮಂಜುನಾಥ್, ರಘೋತ್ಥಮ್ ಮತ್ತಿತರರು ಕಲ್ಯಾಣಿ ಶುಚಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -
- Advertisement -