Home News ಪುರಸಭೆಯ ಸ್ಥಳವೇ ತ್ಯಾಜ್ಯಗಳ ತಾಣ

ಪುರಸಭೆಯ ಸ್ಥಳವೇ ತ್ಯಾಜ್ಯಗಳ ತಾಣ

0

ಪಟ್ಟಣದ ಮುಖ್ಯ ರಸ್ತೆಯಾದ ಟಿ.ಬಿ.ರಸ್ತೆಯಲ್ಲಿರುವ ಪುರಸಭೆ ಮಳಿಗೆಗಳ ಹಿಂಭಾಗದ ಸ್ಥಳವು ತ್ಯಾಜ್ಯದ ತಾಣವಾಗಿದ್ದು, ರೋಗ ರುಜಿನಗಳನ್ನು ಹರಡುತ್ತಿದೆ.
ಪುರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಈ ಸ್ಥಳದ ಸುತ್ತ ಹೋಟೆಲು, ಸಾರ್ವಜನಿಕ ವಸತಿ ಗೃಹಗಳು, ವೈದ್ಯಕೀಯ ಪ್ರಯೋಗಾಲಯ, ಅಂಧ ಮಕ್ಕಳ ಶಾಲೆ, ಕೆನರಾ ಬ್ಯಾಂಕ್‌ ಇವೆ. ಈ ಪುರಸಭೆಯ ಸ್ಥಳದಲ್ಲಿ ಕಸ ಹಾಕಲು ಒಂದು ಕಂಟೈನರನ್ನು ಇಡಲಾಗಿದೆ. ಅದು ತುಂಬಿ ತುಳುಕುತ್ತಿದೆ ಹಾಗೂ ಅದರ ಸುತ್ತಮುತ್ತ ತ್ಯಾಜ್ಯದ ರಾಶಿ ತುಂಬಿಹೋಗಿದ್ದು, ಬೀದಿ ನಾಯಿಗಳ ತಾಣವಾಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಒಂದೇ ಒಂದು ಶೌಚಾಲಯವಿರದ ಕಾರಣ ಈ ಪುರಸಭೆಯ ಸ್ಥಳವು ಸಾರ್ವಜನಿಕ ಶೌಚಾಲಯ ಕೂಡ ಆಗಿಹೋಗಿದೆ. ಮಳೆ ಬಿದ್ದ ಕಾರಣ ಈ ಸ್ಥಳದಲ್ಲಿರುವರು ಕೆಟ್ಟ ವಾಸನೆಯಿಂದ ಮೂಗುಮುಚ್ಚಿ ಓಡಾಡುವಂತಾಗಿದೆ.
ಪಕ್ಕದಲ್ಲಿನ ನಿವಾಸಿಗರು ಸೊಳ್ಳೆಕಾಟ ಹಾಗೂ ಗಬ್ಬು ನಾರುತ್ತಿರುವ ತ್ಯಾಜ್ಯದ ವಾಸನೆಗೆ ರೋಸಿಹೋಗಿ ಪುರಸಭೆ ಅಧಿಕಾರಿಗಳಿಗೆ ಪ್ರತಿನಿತ್ಯ ಹಿಡಿಶಾಪ ಹಾಕುತ್ತಾರೆ. ಪುರಸಭೆಯವರು ತಮ್ಮದೇ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ ಇನ್ನು ಊರಿನ ಸ್ವಚ್ಛತೆಯನ್ನು ಏನು ತಾನೆ ಮಾಡಿಯಾರು ಎಂದು ಪ್ರಶ್ನಿಸುತ್ತಾರೆ. ಮುಖ್ಯ ರಸ್ತೆಯ ಪಕ್ಕದಲ್ಲೇ ಈ ರೀತಿಯ ದುಸ್ಥಿತಿಯಿದೆ. ಶಿಡ್ಲಘಟ್ಟದಲ್ಲಿ ಮಳೆ ಬಂದರೆ ಚರಂಡಿಗಳು ತುಂಬಿ ತುಳುಕಿ ರಸ್ತೆ ಹಾಗೂ ಮನೆ ಒಳಗೆ ಹರಿಯುತ್ತಿವೆ. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತರಾಗಿದ್ದಾರೆ. ವಾಸಯೋಗ್ಯವಿಲ್ಲದಂತೆ ಪರಿಸರವಿಲ್ಲಿ ಸೃಷ್ಠಿಯಾಗಿದೆ. ಸಂಜೆ ವೇಳೆಯಾದರೆ ಸಾಕು ಸೊಳ್ಳೆಗಳು ಹೆಚ್ಚಾಗುತ್ತವೆ. ಮನೆಯಲ್ಲಿ ಸಂಜೆ ಮಕ್ಕಳನ್ನು ಆಡಲು ಕೂಡ ಬಿಡದಂತೆ ಬಾಗಿಲು ಹಾಕಿಕೊಳ್ಳಬೇಕಾಗಿದೆ ಎಂದು ಈ ಪ್ರದೇಶದ ವಾಸಿ ಸಮೀವುಲ್ಲಾ ಹಾಗೂ ಬಿ.ಸಿ.ಲೋಕೇಶ್‌ ದೂರುತ್ತಾರೆ.
‘ಪುರಸಭೆಯ ವತಿಯಿಂದ ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿ ಹಿತ್ತಲಹಳ್ಳಿಯ ಬಳಿ ತ್ಯಾಜ್ಯವಿಲೇವಾರಿ ಘಟಕವನ್ನು ಸ್ಥಾಪಿಸಿದ್ದಾರೆ. ಆದರೆ ಪಟ್ಟಣದಲ್ಲಿ ಮಾತ್ರ ಎಲ್ಲೆಂದರಲ್ಲಿ ತ್ಯಾಜ್ಯಗಳು ಕಂಡುಬರುತ್ತಿರುವುದು ವಿಪರ್ಯಾಸವಾಗಿದೆ. ಅಲ್ಲಲ್ಲಿ ತ್ಯಾಜ್ಯಗಳನ್ನು ಸುರಿಯಲೆಂದು ಕಂಟೈನರ್‌ಗಳನ್ನು ಇರಿಸಿದ್ದು, ಅವು ತ್ಯಾಜ್ಯದಿಂದ ತುಂಬಿ ತುಳುಕುತ್ತಿದ್ದರೂ ಕಸ ವಿಲೇವಾರಿ ಮಾಡುತ್ತಿಲ್ಲ. ಮಳೆ ಬಂದಾಗ ಇಂಥಹ ತ್ಯಾಜ್ಯವಿರುವ ಸ್ಥಳಗಳು ಖಾಯಿಲೆ ಹರಡುತ್ತವೆಂದು ತಿಳಿದಿದ್ದರೂ, ಪುರಸಭೆಯವರು ಕನಿಷ್ಠ ತಮ್ಮದೇ ಆದ ಸ್ಥಳವನ್ನೂ ಸ್ವಚ್ಛವಾಗಿಟ್ಟುಕೊಂಡಿರದಿರುವುದು ಶಿಡ್ಲಘಟ್ಟದ ಜನರ ದೌರ್ಭಾಗ್ಯವಾಗಿದೆ’ ಎಂದು ಹಿರಿಯ ವಕೀಲ ಅಶ್ವತ್ಥನಾರಾಯಣ್‌ ತಿಳಿಸಿದರು.