‘ಪಟಾಕಿಗಳಿಗೆ ಸುರಿಯುವ ಹಣವನ್ನು ಬಡವರ ಏಳಿಗೆಗೆ ಉಪಯೋಗಿಸಿ’, ‘ದೀಪಾವಳಿ ಅಜ್ಞಾನವನ್ನು ತೊಲಗಿಸಲಿ, ಪಟಾಕಿಗಳು ನಿಮ್ಮ ಬಾಳಿಗೆ ಅಂಧಕಾರವಾಗದಿರಲಿ’, ‘ದುಡ್ಡು ನಿಮ್ಮದೇ, ಪಟಾಕಿ ನಿಮ್ಮದೇ, ಆರದಿರಲಿ ಬೆಳಕು’, ‘ಎಚ್ಚರವಿರಲಿ, ಜನಸಂಚಾರವಿರುವಲ್ಲಿ ಪಟಾಕಿ ಸಿಡಿಸಬಾರದು’, ‘ಶಬ್ಧಮಾಲಿನ್ಯ ಮಾಡದಿರಿ’ ಮುಂತಾದ ಘೋಷಣೆಗಳ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಡಾಲ್ಫಿನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಾಥಾ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಿದ ಶಾಲಾ ವಿದ್ಯಾರ್ಥಿಗಳು ಪಟಾಕಿ ಸಿಡಿಸುವುದರಿಂದಾಗುವ ಅನಾಹುತಗಳು, ಹೊಗೆ, ಶಬ್ಧ ಮಾಲಿನ್ಯ, ಹಣ ಪೋಲಾಗುವುದನ್ನು ತಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟಾಕಿಯಿಂದ ಅನೇಕರು ಕಣ್ಣು ಕಳೆದುಕೊಂಡ ನಿದರ್ಶನಗಳಿವೆ. ಹಣತೆಯನ್ನು ಹಚ್ಚುವ ಮೂಲಕ ಶಾಂತಿಯುತವಾಗಿ ಬೆಳಕಿನ ಹಬ್ಬವನ್ನು ಆಚರಿಸೋಣ ಎಂದು ಅರಿವು ಮೂಡಿಸುವ ಪ್ರಯತ್ನ ಮಾಡಿದರು.
‘ನಮ್ಮ ಶಾಲೆಯ ವಿದ್ಯಾರ್ಥಿಗಳು ಈ ಬಾರಿ ಪಟಾಕಿ ಸಿಡಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದಾರೆ. ಈ ಮೂಲಕ ಶಬ್ಧ ಹಾಗೂ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಸಮಾಜಕ್ಕೆ ಅಳಿಲು ಸೇವೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಈ ಸಂದೇಶವನ್ನು ಸಮಾಜಕ್ಕೂ ಬಿತ್ತರಿಸುವ ನಿಟ್ಟಿನಲ್ಲಿ ಈ ದಿನ ಜಾಥಾ ಹಮ್ಮಿಕೊಂಡಿದ್ದೇವೆ. ಆರೋಗ್ಯ ಹಾಳು ಮಾಡಿಕೊಳ್ಳುವುದು ಮತ್ತು ಪಟಾಕಿ ಸಿಡಿತದಿಂದಾಗುವ ಅವಘಡಗಳನ್ನು ತಡೆಯಿರಿ. ಪಟಾಕಿಗೆ ಖರ್ಚು ಮಾಡುವ ಹಣದಿಂದ ಪುಸ್ತಕ ಕೊಳ್ಳಿ, ಬಡವರಿಗೆ ಸಹಾಯ ಮಾಡಿ ಎಂದು ನಾವೂ ಪಾಲಿಸುತ್ತಾ ಎಲ್ಲರಿಗೂ ತಿಳಿಸುತ್ತಿದ್ದೇವೆ’ ಎಂದು ಡಾಲ್ಫಿನ್ ವಿದ್ಯಾಸಂಸ್ಥೆಯ ಶಿಕ್ಷಕಿ ಸುನೀತಾ ತಿಳಿಸಿದರು.