ಆಂಧ್ರದಿಂದ ನಗರಕ್ಕೆ ಸಾಗಾಣಿಕೆ ಮಾಡುತ್ತಿದ್ದ ಸುಮಾರು 80 ಸಾವಿರ ರೂಗಳ ಬೆಲೆಯ ಐದು ಮೂಟೆಯಷ್ಟು ನಿಷೇಧಿತ ಗುಟ್ಕಾ ಕಲೇಜವನ್ನು ಬುಧವಾರ ಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಬೂಬ್ ನಗರದ ರೋಷನ್ ಮತ್ತು ಅಕ್ಬರ್ ಪಾಷ ಎಂಬುವರನ್ನು ಬಂಧಿಸಿರುವ ಪೊಲೀಸರು, ಅವರು ಗುಟ್ಕಾ ಸಾಗಿಸುತ್ತಿದ್ದ ವ್ಯಾನ್ ಮತ್ತು ಗುಟ್ಕಾ ಮೂಟೆಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.
ತಿರುಪತಿಯಿಂದ ಚಿಕ್ಕಬಳ್ಳಾಪುರಕ್ಕೆ ಬರುವ ಖಾಸಗಿ ಬಸ್ಸಿನಲ್ಲಿ ನಿಷೇಧಿತ ಗುಟ್ಕಾವನ್ನು ಸಾಗಿಸಿ, ನಗರದ ಹೊರವಲಯದ ಬೂದಾಳ ಗೇಟ್ ಬಳಿ ಇಳಿಸಿಕೊಂಡು, ಅಲ್ಲಿಂದ ಮಾರುತಿ ವ್ಯಾನ್ಗೆ ತುಂಬಿ ತರುವಾಗ ಪೊಲೀಸರು ಧಾಳಿ ನಡೆಸಿದ್ದಾರೆ.
ಧಾಳಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಜಿಲ್ಲಾ ಅಂಕಿತ ಅಧಿಕಾರಿ ಮಹದೇವಶೆಟ್ಟಿ ಭೇಟಿ ನೀಡಿದ್ದರು.
ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನೊಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲ ಆಹಾರ ಪದಾರ್ಥಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕರುಳು, ಶ್ವಾಸಕೋಶ, ಹೃದಯಕ್ಕೆ ಸಂಬಂಧಿಸಿದಂತೆ ಹಾಗೂ ಕ್ಯಾನ್ಸರ್ ರೋಗಗಳಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಇದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ಗಮನಿಸಿ ಸರ್ಕಾರ ನಿಷೇಧವನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿ ಎರಡು ವರ್ಷ ಕಳೆದಿದ್ದರೂ ತಾಲ್ಲೂಕಿನಾದ್ಯಂತ ಖಲೇಜಾ ಎಂಬ ಹೆಸರಿನಲ್ಲಿ ಗುಟ್ಕಾ ಮಾರಾಟ ನಿರಂತರವಾಗಿ ನಡೆಯುತ್ತಿತ್ತು. ಕಟ್ಟುನಿಟ್ಟಿನ ಕ್ರಮ ಕೈಗೊಂಡು ಈ ರೀತಿಯ ಧಾಳಿಗಳನ್ನು ಮೊದಲೇ ಪೊಲೀಸರು ನಡೆಸಬೇಕಿತ್ತು ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿ ಬಂದಿತು.
- Advertisement -
- Advertisement -
- Advertisement -
- Advertisement -