Home News ನಗರಸಭೆ ಅನುದಾನ ದರ್ಬಳಕೆಯಾಗಿದೆ

ನಗರಸಭೆ ಅನುದಾನ ದರ್ಬಳಕೆಯಾಗಿದೆ

0

ಕಳೆದ ಹತ್ತು ವರ್ಷಗಳಿಂದ ನಗರಸಭೆಗೆ ಸರ್ಕಾರದಿಂದ ಬರುತ್ತಿರುವ ಅನುದಾನಗಳು ದುರುಪಯೋಗವಾಗಿದ್ದು, ನಗರದ ಅಭಿವೃದ್ಧಿ ಕುಂಠಿತವಾಗಿದೆ. ಅನುದಾನಗಳ ಬಳಕೆಯ ಕುರಿತಂತೆ ಲೋಕಾಯುಕ್ತ ತನಿಖೆ ನಡೆಯಬೇಕೆಂದು ಕೆಲ ನಗರಸಭಾ ಸದಸ್ಯರು ಒತ್ತಾಯಿಸಿದರು.
ನಗರಸಭೆಯಲ್ಲಿ ಸೋಮವಾರ ಅನುದಾನಗಳ ಹಂಚಿಕೆ ಹಾಗೂ ಬಳಕೆಯ ಕುರಿತಂತೆ ಮತ್ತು ನಗರಾಭಿವೃದ್ಧಿಗೆ ವಿವಿಧ ಯೋಜನೆಗಳಡಿಯಲ್ಲಿ ಕರೆಯಲಾಗಿದ್ದ ಟೆಂಡರ್ ದರಗಳನ್ನು ಅನುಮೋದಿಸುವ ಬಗ್ಗೆ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ನಗರ ಸಭೆಯ ಸದಸ್ಯರ ನಡುವೆ ವಾಗ್ಯುದ್ಧ ನಡೆಯಿತು. ಒಬ್ಬರನ್ನೊಬ್ಬರು ಬೈದಾಡುತ್ತಾ ಹೊಡೆದಾಡುವ ಮಟ್ಟಕ್ಕೂ ಹೋಗುತ್ತಾ ಒಬ್ಬರನ್ನೊಬ್ಬರು ನಿಂದಿಸುತ್ತಾ ಆರೋಪಗಳು ಹಾಗೂ ಪ್ರತ್ಯಾರೋಪಗಳು ನಡೆಯಿತು. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಹಿಳಾ ಸದಸ್ಯರು ಏನು ನಡೆಯುತ್ತಿದೆ ಎಂದು ತಿಳಿಯದೇ ನೋಡುತ್ತಾ ಕುಳಿತಿದ್ದರು.
ಕಳೆದ ಬಾರಿ ತಾತಹಳ್ಳಿ, ಚಾಗೆ ಸಮೀಪ 22.50 ಎಕರೆ ಜಮೀನು ಪುರಸಭೆಯಿಂದ ಖರೀದಿಸಿದ್ದು. ಒಂದು ಎಕರೆಗೆ ಏಳು ಲಕ್ಷ 25 ಸಾವಿರ ರೂಗಳಂತೆ ನಿಗದಿಪಡಿಸಲಾಗಿತ್ತು. ಆದರೆ ರೈತರಿಗೆ ಒಂದು ಎಕರೆಗೆ ಕೇವಲ 2.25 ಲಕ್ಷ ರೂಗಳು ಹಣ ಮಾತ್ರ ಸೇರಿದೆ. ಉಳಿಕೆ ಹಣ ದುರ್ಬಳಕೆಯಾಗಿದೆ. ಈ ಜಮೀನಿನ ಖರೀದಿಯ ಹಣದ ವಿಷಯವಾಗಿ ನಗರಸಭಾ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನಗಳು ಬಂದಿದ್ದರೂ ಸಹ ನಗರದಲ್ಲಿ ಸ್ವಚ್ಛತೆಯಿಲ್ಲ, ನೀರಿನ ಸಮಸ್ಯೆ ಬಗೆಹರಿಸಿಲ್ಲ, ಬೀದಿ ದೀಪಗಳ ವ್ಯವಸ್ಥೆಯಿಲ್ಲದೆ ಹಲವಾರು ಬೀದಿಗಳು ಕತ್ತಲಲ್ಲಿವೆ. ಹಲವು ವಾರ್ಡುಗಳಿಗೆ ಹದಿನೈದು ದಿನಗಳಾದರೂ ನೀರು ಸರಬರಾಜಾಗುತ್ತಿಲ್ಲ. ಇನ್ನು ರಸ್ತೆಗಳಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಸೊಳ್ಳೆಗಳ ಕಾಟದಿಂದಾಗಿ ನಗರದ ಕೆಲ ವಾರ್ಡುಗಳಂತೂ ಬದುಕು ಕಷ್ಟಕರವಾಗಿದೆ. ಜನಪ್ರತಿನಿಧಿಗಳಾಗಿದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾದಿಂದ ಬರುತ್ತಿರುವ ಅನುದಾನಗಳ ಸೋರಿಕೆಯನ್ನು ತಡೆಗಟ್ಟಲು ತಕ್ಷಣ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಕಳೆದ ಒಂದು ವರ್ಷಗಳಿಂದ ನಗರಸಭಾ ಸದಸ್ಯರಿಗೆ ಗೌರವಧನ ನೀಡದೆ ಇರುವ ವಿಚಾರವಾಗಿ ಚರ್ಚೆ ನಡೆಯಿತು. ಕಳೆದ ರಂಜಾನ್ ಹಬ್ಬಕ್ಕೆ ಮುಸ್ಲಿಂ ಸದಸ್ಯರಿಗೆ ಮಾತ್ರ ಗೌರವಧನ ನೀಡಲಾಗಿದೆ, ಇತರೇ ಯಾವ ಸದಸ್ಯರಿಗೂ ನೀಡದೇ ತಾರತಮ್ಯ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೆ ಉಳಿದ ಸದಸ್ಯರಿಗೆ ಗೌರವಧನ ನೀಡಬೇಕೆಂದು ಕೆಲ ಸದಸ್ಯರು ಬೇಡಿಕೆ ಇಟ್ಟಾಗ, ಡಿ ಗ್ರೂಪ್ ನೌಕರರಿಗೆ 6 ತಿಂಗಳಿಂದಲೂ ವೇತನ ನೀಡಿಲ್ಲ, ಮೊದಲು ಅವರಿಗೆ ವೇತನ ನೀಡಿ ಇನ್ನು ಕೆಲವರು ಹೇಳಿದರು. ಆಗ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ನಗರಸಭಾ ಆಯುಕ್ತರು ಹಾಗೂ ಕೆಲ ಸದಸ್ಯರು ಬೈದಾಡುತ್ತಿದ್ದವರನ್ನು ಸಮಾಧಾನ ಪಡಿಸಲು ಹರಸಾಹಸ ಮಾಡಿದರು.
ನಗರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ನಗರಸಭಾ ಆಯುಕ್ತ ಹರೀಶ್, ಸದಸ್ಯರಾದ ಅಫ್ಸರ್ಪಾಷ, ವೆಂಕಟಸ್ವಾಮಿ, ಕಿಶನ್, ಲಕ್ಷ್ಮಣ್, ಜಬೀವುಲ್ಲಾ, ವಹೀದಾ ಕೌಸರ್, ಬಾಲಕೃಷ್ಣ, ಷಫೀವುಲ್ಲಾ, ಪ್ರಭಾವತಿ ಸುರೇಶ್, ಸಂಧ್ಯಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.