ಶಿಡ್ಲಘಟ್ಟದ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಅಪ್ಸರ್‌ಪಾಷ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಶನಿವಾರ ನಡೆಯಿತು. ಶಾಸಕ ಎಂ.ರಾಜಣ್ಣನವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಗರದ ವಾರ್ಡುಗಳ ಮರು ವಿಂಗಡಣೆ, ಕುಡಿಯುವ ನೀರು, ನಗರೋತ್ಥಾನ ನಿಧಿಯ ಹಣ ಬಳಕೆ ಕುರಿತು ಚರ್ಚೆಗಳು ನಡೆದವು.
ಸಭೆ ಆರಂಭವಾಗುತ್ತಿದ್ದಂತೆ ಯಾವ ಅಧಿಕಾರಿಯೂ ಸ್ಥಳೀಯವಾಗಿ ವಾಸ ಇಲ್ಲ. ೧೦ ಗಂಟೆಯಾದರೂ ಕಚೇರಿಗೆ ಅಧಿಕಾರಿಗಳು ಬರೊಲ್ಲ. ಅವರ ಕೈಕೆಳಗಿನ ಸಿಬ್ಬಂದಿಯೂ ಅಷ್ಟೆ ಎಂದು ಸದಸ್ಯ ಸಿಕಂಧರ್ ಆರೋಪಿಸಿದರು.
‘ನನ್ನ ವಾರ್ಡಿನಲ್ಲಿ ಕಳೆದ ಎರಡು ತಿಂಗಳಿಂದಲೂ ಕುಡಿಯುವ ನೀರಿಲ್ಲ. ಕಂದಾಯ ಮಾತ್ರ ಟೈಂ ಸರಿಯಾಗಿ ವಸೂಲಿ ಮಾಡ್ತೀರಿ, ಆದರೆ ಕುಡಿಯೋ ನೀರು ಕೊಡಬೇಕು ಅನ್ನೋ ಜವಾಬ್ದಾರಿ ಇಲ್ಲವಾ’ ಎಂದು ಸದಸ್ಯ ಲಕ್ಷ್ಮಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದರ ಮದ್ಯ ವಾರ್ಡುಗಳ ಮರು ವಿಂಗಡಣೆ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಬಹುತೇಕ ಸದಸ್ಯರು ಆಯುಕ್ತರ ವಿರುದ್ದ ಹರಿಹಾಯ್ದರು. ಯಾರನ್ನು ಕೇಳಿ ನೀವು ಮರು ವಿಂಗಡಣೆ ಮಾಡಿ ಡಿಸಿರವರಿಗೆ ವರದಿ ಸಲ್ಲಿಸಿದಿರಿ ಎಂದು ಕಿಡಿಕಾರಿದರು.
ವಾರ್ಡುಗಳ ಮರುವಿಂಗಡಣೆಗೂ ಸದಸ್ಯರಿಗೂ ಸಂಬಂಧ ಇಲ್ಲ ಎಂದವರು ಇದೀಗ ಏಕೆ ಸಭೆಯಲ್ಲಿ ಆ ವಿಷಯವನ್ನು ಇಟ್ಟಿದ್ದೀರಿ, ಎಲ್ಲಾ ಆಟ ಆಡ್ತೀರಾ, ನಿಮಗೆ ಸದಸ್ಯರು ಅಂದ್ರೆ ಅಷ್ಟು ಕೇವಲವಾ ಎಂದು ಆಯುಕ್ತ ಹರೀಶ್‌ರನ್ನು ತರಾಟೆಗೆ ತೆಗೆದುಕೊಂಡರು.
ಕೊನೆಗೆ ಆ ವರದಿಯನ್ನು ವಾಪಸ್ ತರಿಸಿಕೊಂಡು ಹೊಸದಾಗಿ ಮರುವಿಂಗಡಣೆಯ ವರದಿ ತಯಾರಿಸಿ ಕಳುಹಿಸಿಕೊಡುವ ಭರವಸೆ ನೀಡಿದ ಮೇಲಷ್ಟೆ ಸದಸ್ಯರು ಸಮಾಧಾನವಾದರು.
ಬೀದಿ ದೀಪಗಳ ವಿಷಯ ಚರ್ಚೆ ನಡೆಯುವಾಗ ಸದಸ್ಯ ಶಫೀವುಲ್ಲಾ ಕುಡಿಯುವ ನೀರಿನ ವಿಷಯ ಪ್ರಸ್ತಾಪಿಸಿದರು. ಆಗ ಮದ್ಯ ಪ್ರವೇಶಿಸಿದ ಸದಸ್ಯ ರಾಘವೇಂದ್ರ ಒಬ್ಬರು ಮಾತನಾಡಿದ ನಂತರ ಇನ್ನೊಬ್ಬರು ಮಾತನಾಡಿ ಎಂದಾಗ ಇಬ್ಬರೂ ಸದಸ್ಯರ ಮದ್ಯೆ ಮಾತಿನ ಚಕಮುಕಿ ನಡೆಯಿತು.
ಆಗ ಶಾಸಕ ಎಂ.ರಾಜಣ್ಣ ಎದ್ದುನಿಂತು ಕೈ ಮುಗಿದು ದಯಮಾಡಿ ಸಭೆಯಲ್ಲಿ ಶಿಸ್ತು, ಶಾಂತಿಯನ್ನು ಕಾಪಾಡಿ ಎಂದು ಸಭೆಯನ್ನು ತಹಬಂದಿಗೆ ತಂದು ಉಳಿದ ವಿಷಯಗಳ ಬಗ್ಗೆ ಚರ್ಚಿಸಿದರು.
- Advertisement -
- Advertisement -
- Advertisement -