ನಗರಸಭೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಸದಸ್ಯರು ತಮ್ಮ ವಾರ್ಡುಗಳ ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಕಳೆದ ಒಂಬತ್ತು ತಿಂಗಳ ಹಿಂದೆ ಕೊರೆದ ಕೊಳವೆಬಾವಿಗೆ ಈವರೆಗೂ ಮೋಟರ್, ಪಂಪು ಅಳವಡಿಸಿಲ್ಲದಿರುವುದರಿಂದ ಕೊಳವೆಬಾವಿ ಕೊರೆಸಿದಾಗ ೬,೦೦೦ ಗ್ಯಾಲನ್ ಬರುತ್ತಿದ್ದ ನೀರು ಇದೀಗ ಒಂದು ಸಾವಿರಕ್ಕಿಳಿದಿದೆ. ಸಾಲದೆಂಬಂತೆ ಇತ್ತೀಚೆಗೆ ನಗರದಾದ್ಯಂತ ೧೯ ಕೊಳವೆ ಬಾವಿ ಕೊರೆಸಿದ್ದು ೧೨ ರಲ್ಲಿ ನೀರು ಸಿಕ್ಕಿದೆ. ಇದಕ್ಕೆ ಮೋಟರ್ ಪಂಪು ಅಳವಡಿಸಲು ಯಾವ ಕ್ರಮ ಜರುಗಿಸಿದ್ದೀರಿ ಎಂದು ನಗರಸಭೆ ಸದಸ್ಯ ಜೆ.ಎಂ.ಬಾಲಕೃಷ್ಣ ಕೇಳಿದ ಪ್ರಶ್ನೆಗೆ ೧೨ ಕೊಳವೆಬಾವಿಗಳಿಗೆ ಮೋಟರ್, ಪಂಪು ಅಳವಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು ಆದಷ್ಟು ಬೇಗ ಮೋಟರ್ ಪಂಪು ಅಳವಡಿಸಿ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಆಯುಕ್ತ ಹರೀಶ್ ಹೇಳಿದರು.
ನಗರದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರಿಗೆ ಪ್ರತಿ ತಿಂಗಳೂ ಸಂಬಳ ನೀಡಲು ಕ್ರಮ ಜರುಗಿಸಿ ಎಂದು ಸೂಚಿಸಿದ ಸದಸ್ಯರು ನಗರಸಭೆ ಆಯ-ವ್ಯಯದ ಬಗ್ಗೆ ಚರ್ಚಿಸಲು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಸೂಚಿಸಿದರು.
ಸದಸ್ಯ ಬಾಲಕೃಷ್ಣ ಮಾತನಾಡಿ, ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ. ಸಮರ್ಪಕವಾದ ನೀರಿನ ನಿರ್ವಹಣೆ ಮಾಡಿ. ಜನರಿಂದ ಆಯ್ಕೆಯಾದ ನಾವು ಜನರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನಗರಸಭೆಯ ಆದಾಯ ಮತ್ತು ಖರ್ಚಿನ ಮಾಹಿತಿಯನ್ನು ನೀಡಿ ಎಂದು ಆಗ್ರಹಿಸಿದರು.
ಸದಸ್ಯೆ ಪ್ರಭಾವತಿ ಸುರೇಶ್, ತಮ್ಮ ವಾರ್ಡಿಗೆ ವಾಟರ್ ಮನ್ ಬಂದು ಒಂದು ತಿಂಗಳಾಯಿತು. ನೀರಿನ ಸಮಸ್ಯೆ ಬಿಗಡಾಯಿಸಿದೆ. ಅಧಿಕಾರಿಗಳು ಈ ಬಗ್ಗೆ ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.
ಸದಸ್ಯ ವೆಂಕಟಸ್ವಾಮಿ, 13ನೇ ವಾರ್ಡಿನಲ್ಲಿ ವಿದ್ಯುತ್ ದೀಪಗಳು ಅಂಟದೇ ಎರಡು ದಿನಗಳಾಗಿವೆ. ಈ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಸದಸ್ಯ ಲಕ್ಷ್ಮಣ, ನೀರಿನ ಸಮಸ್ಯೆ ಅಷ್ಟೊಂದು ಕಾಡುತ್ತಿದ್ದರೂ ಕೊಳವೆ ಬಾವಿಗಳಿಗೆ ಏಕೆ ಇನ್ನೂ ಪಂಪ್ಸೆಟ್ ಅಳವಡಿಸಿಲ್ಲ, ಎರಡು ತಿಂಗಳಾದರೂ ಹರಾಜು ಹಣವನ್ನೇಕೆ ವಸೂಲು ಮಾಡಿಲ್ಲವೆಂದು ಅಧಿಕಾರಿಗಳನ್ನು ಕೇಳಿದರು.
ಸದಸ್ಯ ರಾಘವೇಂದ್ರ, ನಗರಸಭೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ನಗರಸಭೆಯ ಕಟ್ಟಡಗಳಲ್ಲಿ ಆರು ತಿಂಗಳಿನಿಂದಲೂ ಬಾಡಿಗೆ ವಸೂಲಿ ಮಾಡಿಲ್ಲ. ಆದಾಯದ ಬಗ್ಗೆ ನಿರ್ಲಕ್ಷ್ಯ ವಹಿಸಿ, ನೌಕರರಿಗೆ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಸದಸ್ಯರು ಸೂಚಿಸಿದ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಆಯುಕ್ತ ಎಚ್.ಎ.ಹರೀಶ್ ಮಾತನಾಡಿ, ನಗರದಲ್ಲಿ ಇರುವ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ವಿಶೇಷ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಪೈಕಿ ೨೦೧೩–-೧೪ ನೇ ಸಾಲಿನ ೧೩ ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ ಉಳಿಕೆ ಮೊತ್ತಕ್ಕಾಗಿ ಆಹ್ವಾನಿಸಿದ್ದ ಟೆಂಡರ್ ಅನುಮೋದಿಸುವುದು, ನಗರಸಭೆ ಕಛೇರಿ ಆಡಳಿತಕ್ಕೆ ಸಂಬಂಧಿಸಿದಂತೆ ಲಘು ಮೋಟಾರು ವಾಹನ ಬಾಡಿಗೆ ಆಧಾರದ ಮೇಲೆ ಸರಬರಾಜು ಮಾಡಲು ಆಹ್ವಾನಿಸಿದ್ದ ಟೆಂಡರ್ ದರಕ್ಕೆ ಅನುಮೋದನೆ ನೀಡುವುದು ಹಾಗೂ ಇತರ ನಾಲ್ಕು ವಿಷಯಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಅನುಮೋದಿಸಲಾಯಿತು.
ನಗರಸಭೆ ಅಧ್ಯಕ್ಷೆ ಮುಷ್ಠರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್(ನಂದು), ನಗರಸಭೆ ಸದಸ್ಯರು ಹಾಜರಿದ್ದರು.
- Advertisement -
- Advertisement -
- Advertisement -