ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಅವರ ಪ್ರತಿಕೃತಿ ದಹನ ಮಾಡಿದ ಹಸಿರುಸೇನೆ, ಜನಪರ ವೇದಿಕೆ ಹಾಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಶನಿವಾರ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ಯಾಂಕ್, ಪೆಟ್ರೋಲ್ ಬಂಕ್, ಸಿನಿಮಾ ಥಿಯೇಟರ್, ಹೋಟೆಲ್ ಮುಚ್ಚುವ ಮೂಲಕ ಬಂದ್ಗೆ ಬೆಂಬಲಿಸಿದ್ದವು. ರೇಷ್ಮೆ ಗೂಡಿನ ಮಾರುಕಟ್ಟೆ, ಔಷಧಿ ಅಂಗಡಿಗಳು ಹಾಗೂ ಕೆ.ಎಂ.ಎಫ್ ಹಾಲಿನ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜನಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿತ್ತು. ವಕೀಲರು ನ್ಯಾಯಾಂಗ ಕಲಾಪದಿಂದ ಹೊರಗುಳಿದು ಬಂದ್ಗೆ ಬೆಂಬಲಿಸಿದರು.
ತಾಲ್ಲೂಕಿನ ಮೇಲೂರು, ಮಳ್ಳೂರು, ಚೌಡಸಂದ್ರ, ಹಿತ್ತಲಹಳ್ಳಿ, ಹಂಡಿಗನಾಳ, ತಾದೂರು, ಜಂಗಮಕೋಟೆ, ಎಚ್.ಕ್ರಾಸ್, ದಿಬ್ಬೂರಹಳ್ಳಿ, ಸಾದಲಿ, ಸೊಣ್ಣೇನಹಳ್ಳಿ ಮುಂತಾದೆಡೆ ರಸ್ತೆ ತಡೆ ನಡೆಸಿ ಬಂದ್ ಆಚರಿಸಿದರು. ಜನಗಣತಿ ಮಾಡಲು ಗ್ರಾಮಾಂತರ ಪ್ರದೇಶಗಳಿಂದ ಹೋಗಬೇಕಿದ್ದ ಶಿಕ್ಷಕರಿಗೆ ಬಂದ್ನಿಂದಾಗಿ ತೊಂದರೆಯಾಯಿತು.
ರೈತ ಸಂಘ ಹಾಗೂ ಹಸಿರುಸೇನೆ, ಕರ್ನಾಟಕ ಜನಪರ ವೇದಿಕೆ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗದ ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ರಾಜ್ಯ ಸರ್ಕಾರವು ಮೇಕೆದಾಟು ಬಳಿಯಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದೆ, ಇದನ್ನು ಖಂಡಿಸುತ್ತೇವೆ ಎಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.