ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಸುಮಾರು ಐದು ಕೋಟಿ ರೂಗಳಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ತಾಲ್ಲೂಕಿನ ಆನೂರು, ಕೊತ್ತನೂರು, ಮಳಮಾಚನಹಳ್ಳಿ ಮತ್ತು ತುಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆಲಿಕಲ್ಲಿನ ಮಳೆ ಹಾಗೂ ಬಿರುಗಾಳಿಯಿಂದಾಗಿ ಸುಮಾರು ಎರಡೂವರೆ ಕೋಟಿ ರೂಗಳಿಗೂ ಹೆಚ್ಚಿನ ಬೆಳೆ ನಷ್ಟವುಂಟಾಗಿದೆ.
ತಾಲ್ಲುಕಿನ ಹುಜಗೂರು, ತುಮ್ಮನಹಳ್ಳಿ, ಆನೂರು, ಗೊರಮಡುಗು, ಬಸವಾಪಟ್ಟಣ ಮುಂತಾದ ಗ್ರಾಮಗಳಲ್ಲಿ ದ್ರಾಕ್ಷಿ, ಟೊಮೇಟೊ, ಬೀನ್ಸ್, ಹಿಪ್ಪುನೇರಳೆಸೊಪ್ಪು, ಸೌತೆಕಾಯಿ, ದಾಳಿಂಬೆ, ಸೀಬೆ, ಮಾವು, ಗೋಡಂಬಿ ಸೇರಿದಂತೆ ಹಲವಾರು ಬೆಳೆಗಳು ನಾಶವಾಗಿವೆ.
‘ಆರು ಎಕರೆ ದ್ರಾಕ್ಷಿ ಮತ್ತು ಮೂರು ಎಕರೆ ದಾಳಿಂಬೆ ನಿನ್ನೆ ಸಂಜೆ ಏಳುಗಂಟೆಗೆ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ದ್ರಾಕ್ಷಿ ಉತ್ತಮ ಫಸಲು ಬಿಟ್ಟಿದ್ದು ಇನ್ನು ಒಂದೂವರೆ ತಿಂಗಳಿಗೆ ಕಟಾವು ಮಾಡುವ ಹಂತದಲ್ಲಿತ್ತು. ಇದರಲ್ಲಿ ಸುಮಾರು 25 ಲಕ್ಷ ರೂ ನಷ್ಟವುಂಟಾಗಿದೆ. ದಾಳಿಂಬೆ ನಮ್ಮಲ್ಲಿ ಬೆಳೆಯುವುದೇ ಕಷ್ಟ ಅಂಥದ್ದನ್ನು ಬೆಳೆದರೂ ಪ್ರಕೃತಿ ನಮಗೆ ಸಹಕರಿಸದೇ ಅಪಾರ ನಷ್ಟವುಂಟಾಗಿದೆ’ ಎನ್ನುತ್ತಾರೆ ಹುಜಗೂರು ರಾಮಣ್ಣ.
ಹುಜಗೂರಿನ ರಾಮಣ್ಣ ಅವರ ಆರು ಎಕರೆ ದ್ರಾಕ್ಷಿ, ಮೂರು ಎಕರೆ ದಾಳಿಂಬೆ ತೋಟ, ಮುನಿನಾರಾಯಣಪ್ಪ ಅವರ ಒಂದೂವರೆ ಎಕರೆ ದ್ರಾಕ್ಷಿ, ಬೆಂಗಳೂರು ಬ್ಲೂ ಎರಡು ಎಕರೆ, ಮಾವು ಎರಡು ಎಕರೆ, ಕೃಷ್ಣಾರೆಡ್ಡಿ ಅವರ ಎರಡು ಎಕರೆ ಸೌತೆಕಾಯಿ, ಎಚ್.ಎಂ.ಕೃಷ್ಣಾರೆಡ್ಡಿ ಅವರ ಎರಡು ಎಕರೆ ಹಿಪ್ಪುನೇರಳೆ, ತುಮ್ಮನಹಳ್ಳಿಯ ನಾರಾಯಣಸ್ವಾಮಿ ಅವರ ಮೂರು ಎಕರೆ ದ್ರಾಕ್ಷಿ ಹಾಗೂ ಪ್ಲಾಸ್ಟಿಕ್ ಪೇಪರ್ ಹೊದಿಕೆಯ ಶೆಡ್, ಗೊರಮಡುಗು ಕೆಂಪರೆಡ್ಡಿ ಅವರ ಒಂದೂವರೆ ಎಕರೆ ದ್ರಾಕ್ಷಿ, ನಾಗೇಶ್ ಎರಡು ಎಕರೆ ದ್ರಾಕ್ಷಿ, ಮಂಜುನಾಥ್ ಅವರ ಮೂರು ಎಕರೆ ಟೊಮೆಟೋ, ಜಿ.ಆರ್.ರಾಜಣ್ಣ ಅವರ ಐದು ಎಕರೆ ಬಾಳೆ ತೋಟ, ಸೀಗೆಹಳ್ಳಿಯ ಈರಣ್ಣ ಅವರ ಏಳು ಎಕರೆ ಹಿಪ್ಪುನೇರಳೆ ಸೊಪ್ಪಿನ ತೋಟ, ಆನೂರು ಗ್ರಾಮದ ಸುರೇಶ್ ಅವರ ಒಂದೂವರೆ ಎಕರೆ ರಿಂಗ್ ಬೀನ್ಸ್, ಹೀರೇಕಾಯಿ ಸೇರಿದಂತೆ ಹಲವಾರು ಬೆಳೆಗಳು ಸಂಪೂರ್ಣ ನಾಶವಾಗಿವೆ.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬಸವಾಪಟ್ಟಣ ಗ್ರಾಮದಲ್ಲಿ ಶುದ್ಧ ನೀರಿನ ಘಟಕದ ಕಬ್ಬಿಣದ ಶೀಟ್‌ಗಳಿಂದ ನಿರ್ಮಿಸಿದ್ದ ಶೆಡ್ ಗಾಳಿಗೆ ಹಾರಿಹೋಗಿ ಸುಮಾರು ಇಪ್ಪತ್ತು ಅಡಿಗಳ ದೂರದಲ್ಲಿ ಬಿದ್ದಿದ್ದು ಶನಿವಾರದ ಬಿರುಗಾಳಿಯ ತೀವ್ರತೆ ಮತ್ತು ಪರಿಣಾಮವನ್ನು ಪ್ರತಿಬಿಂಬಿಸುತ್ತಿತ್ತು.
ತಾಲ್ಲೂಕಿನ ಗಂಗನಹಳ್ಳಿ, ಮುತ್ತೂರು, ಮಳ್ಳೂರು, ಕಾಚಹಳ್ಳಿ, ಮಳಮಾಚನಹಳ್ಳಿಯಲ್ಲಿ ಸುಮಾರು 60 ಎಕರೆ ದ್ರಾಕ್ಷಿ ಬೆಳೆ ನೆಲಕಚ್ಚಿದ್ದು, 500 ಟನ್ ದ್ರಾಕ್ಷಿ ಹಾಳಾಗಿದೆ. ಇದರ ಮೊತ್ತವೇ ಒಂದೂವರೆ ಕೋಟಿ ರೂಗಳಾಗುತ್ತವೆ. ತಾಲ್ಲೂಕಿನ ಮಳ್ಳೂರು, ಮುತ್ತೂರು, ಗಂಗನಹಳ್ಳಿ, ಮೇಲೂರು, ಮುಗಿಲಡಿಪಿ ಗ್ರಾಮದ ವ್ಯಾಪ್ತಿಯಲ್ಲಿ 350 ರಿಂದ 400 ಎಕರೆ ಹಿಪ್ಪುನೇರಳೆ ತೋಟವು ನಾಶವಾಗಿದೆ. ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯಿಂದಾಗಿ ಹಿಪ್ಪುನೇರಳೆ ಸೊಪ್ಪು ಜರಡಿಯಂತಾಗಿದ್ದು, ಈ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಬಳಸಲಾಗುವುದಿಲ್ಲವೆಂದು ರೈತರು ಕಂಗಾಲಾಗಿದ್ದಾರೆ. ಇದಲ್ಲದೆ ತರಕಾರಿ, ಬಾಳೆ, ಟೊಮೇಟೋ, ಮಾವು,ತೆಂಗು ಮತ್ತು ದಾಳಿಂಬೆ ಬೆಳೆಗಳೂ ನಾಶವಾಗಿವೆ.
ಮೇಲೂರಿನ ಸೂರ್ಯನಾರಾಯಣಪ್ಪ ಅವರ ಹಿಪ್ಪುನೇರಳೆ ತೋಟ, ನಾಗರಾಜ್ ಅವರ ದ್ರಾಕ್ಷಿ ತೋಟ, ಟಿ.ಎನ್.ಮಂಜುನಾಥ್ ಅವರ ಪರಂಗಿ, ದ್ರಾಕ್ಷಿ, ದಾಳಿಂಬೆ ತೋಟ, ಶ್ರೀನಿವಾಸ್‌ಅವರ ಟೊಮೆಟೋ ಮತ್ತು ದ್ರಾಕ್ಷಿ ತೋಟ, ಮುಗಿಲಡಿಪಿ ರಾಮಯ್ಯ ಅವರ ದ್ರಾಕ್ಷಿ ತೋಟ, ಮುತ್ತೂರಿನ ರಾಮಕೃಷ್ಣಪ್ಪ ಅವರ ಬಾಳೆ ತೋಟ, ನಾರಾಯಣಸ್ವಾಮಿ ಅವರ ದ್ರಾಕ್ಷಿ ತೋಟಗಳಿಗೆ ಶಾಸಕರೊಂದಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ನಷ್ಟದ ಸಮೀಕ್ಷೆ ನಡೆಸಿದರು.
‘ತಾಲ್ಲೂಕಿನಾದ್ಯಂತ ರೈತರು ಪ್ರಕೃತಿ ವಿಕೋಪದಿಂದಾಗಿ ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಎಲ್ಲವನ್ನೂ ಸಮಗ್ರವಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು’ ಎಂದು ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದ್ದಾರೆ.
ಬೆಳೆ ನಷ್ಟವಲ್ಲದೆ ತಾಲ್ಲೂಕಿನ ಹಲವೆಡೆ ಹುಳು ಸಾಕುವ ಮನೆಗಳ ಮೇಲೆ ಹೊದಿಸಿದ್ದ ಶೀಟುಗಳು ಹಾರಿಹೋಗಿದ್ದು ಅಪಾರ ನಷ್ಟವನ್ನು ತಂದಿದೆ. ತಾಲ್ಲೂಕಿನ ಚಿಕ್ಕದಾಸಾರ್‍ಲಹಳ್ಳಿ, ಮುತ್ತೂರು ಗ್ರಾಮಗಳಲ್ಲಿ ಹುಳುಮನೆಗಳಿಗೆ ನಷ್ಟವಾಗಿದ್ದರೆ, ಮುಗಿಲಡಿಪಿ ಗ್ರಾಮದಲ್ಲಿ ಮುನೇಗೌಡ, ನಾರಾಯಣಸ್ವಾಮಿ ಎಂಬುವರ ವಾಸದ ಮನೆಯ ಮೇಲಿನ ಶೀಟುಗಳು ಮುರಿದು, ಮನೆಯಲ್ಲಿನ ದಿನಬಳಕೆ ವಸ್ತುಗಳು ಹಾಳಾಗಿವೆ. ತಾಲ್ಲೂಕಿನ ಚೌಡಸಂದ್ರ ಮತ್ತು ಮೇಲೂರು ನಡುವೆ ರಸ್ತೆಯ ಪಕ್ಕದಲ್ಲಿದ್ದ ಮರಗಳು ಬುಡ ಸಮೇತ ರಸ್ತೆಗೆ ಬಿದ್ದಿದ್ದನ್ನು ಸಾರ್ವಜನಿಕರೇ ಜೆಸಿಬಿ ಬಳಸಿ ಅವುಗಳನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಒಂದು ಗಂಟೆ ಕಾಲ ಬೆಂಗಳೂರಿಗೆ ಸಂಚರಿಸುವ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
‘ಅಧಿಕಾರಿಗಳು ತಾಲ್ಲೂಕಿನಲ್ಲಿ ಅಕಾಲಿಕ ಬಿರುಗಾಳಿ ಸಮೇತದ ಆಲಿಕಲ್ಲಿನ ಮಳೆಯಿಂದಾದ ಸಮಗ್ರ ನಷ್ಟದ ವರದಿಯನ್ನು ತಯಾರಿಸಿದ ನಂತರ ಕೃಷಿ ಸಚಿವರು, ತೋಟಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ನಿಯೋಗದೊಂದಿಗೆ ತೆರಳಿ ನಷ್ಟ ಪರಿಹಾರಕ್ಕಾಗಿ ಒತ್ತಾಯಿಸುತ್ತೇನೆ. ನೀರೇ ಅಮೃತದ ಸಮಾನವಾಗಿರುವ ನಮ್ಮ ಭಾಗದ ರೈತರು ಅಪಾರ ಶ್ರಮದಿಂದ ಬೆಳೆದ ಫಲ ನೆಲಕಚ್ಚುವುದರಿಂದ ಅವರೆಲ್ಲ ಕಂಗಾಲಾಗಿದ್ದಾರೆ’ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಆಲಿಕಲ್ಲಿನಿಂದ ದ್ರಾಕ್ಷಿ ಬೆಳೆ ಹಾಳು
ಬಿರುಗಾಳಿ, ಆಲಿಕಲ್ಲು ಮಳೆಯಾದಾಗ ಕೊಯ್ಲಿನ ಹಂತದ ದ್ರಾಕ್ಷಿ ಬೆಳೆ ಬಳ್ಳಿಯಲ್ಲೇ ಒಡೆಯುತ್ತದೆ. ಒಡೆದ ದ್ರಾಕ್ಷಿಯಿಂದಾಗಿ ಇಡೀ ದ್ರಾಕ್ಷಿ ಗೊಂಚಲೇ ಕೊಳೆಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ಧಾರಣಿ ಕಳೆದುಕೊಳ್ಳುತ್ತದೆ. ಹಾಗಾಗಿ ಬಹುತೇಕ ಸಂದರ್ಭದಲ್ಲಿ ದ್ರಾಕ್ಷಿ ಮಾರಾಟಕ್ಕೂ ಯೋಗ್ಯವಾಗದೇ ತಿಪ್ಪೆಗೆ ಹಾಕಬೇಕಾಗುತ್ತದೆ. ಅದನ್ನು ಒಣ ದ್ರಾಕ್ಷಿ ಮಾಡಲೂ ಸಾಧ್ಯವಾಗುವುದಿಲ್ಲ. ಇದರ ಪರಿಣಾಮ ರೈತರಿಗೆ ದ್ರಾಕ್ಷಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ದ್ರಾಕ್ಷಿ ತುಂಬ ನಿರ್ವಹಣೆ ಅಗತ್ಯವಿರುವ ಬೆಳೆ. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿರುವ ದ್ರಾಕ್ಷಿ ಬೆಳೆ ಪ್ರಕೃತಿ ವೈಪರೀತ್ಯದಿಂದಾಗಿ ನಷ್ಟ ತಂದೊಡ್ಡಿದೆ. ಸರ್ಕಾರ ರೈತರ ಕೈ ಹಿಡಯಲೇಬೇಕು ಎಂದು ಹುಜಗೂರು ಗ್ರಾಮದ ದ್ರಾಕ್ಷಿ ಬೆಳೆಗಾರ ಮುನಿನಾರಾಯಣಪ್ಪ ಆಗ್ರಹಿಸಿದ್ದಾರೆ.
ಜರಡಿಯಂತಾದ ಹಿಪ್ಪುನೇರಳೆ ಸೊಪ್ಪು
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ರೇಷ್ಮೆಗೆ ಅತ್ಯಗತ್ಯವಾದ ಹಿಪ್ಪುನೇರಳೆ ಸೊಪ್ಪು ಬಿರುಗಾಳಿ, ಆಲಿಕಲ್ಲು ಮಳೆಯಾದಾಗ ಜರಡಿಯ ರೀತಿ ಆಗಿಬಿಡುತ್ತದೆ. ಕೆಲವೆಡೆಯಂತೂ ನೆಲಕ್ಕೆ ಸೊಪ್ಪುಗಳು ನೆಲಕ್ಕೆ ಮಲಗಿಬಿಟ್ಟಿವೆ. ಈ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಬಳಸಲಾಗುವುದಿಲ್ಲವೆಂದು ರೈತರು ಕಂಗಾಲಾಗಿದ್ದಾರೆ. ಈ ರೀತಿಯ ಸೊಪ್ಪನ್ನು ಆಹಾರವಾಗಿ ಜಾನುವಾರುಗಳಿಗೂ ರೈತರು ಬಳಸದಿರುವುದರಿಂದ ಅಪಾರ ನಷ್ಟವುಂಟಾಗಿದೆ ಎಂದು ಸುಮಾರು ಏಳು ಎಕರೆ ಹಿಪ್ಪುನೇರಳೆ ಸೊಪ್ಪಿನ ನಷ್ಟವನ್ನು ಹೊಂದಿದ ಸೀಗೆಹಳ್ಳಿಯ ಈರಣ್ಣ ನೋವಿನಿಂದ ಹೇಳಿದರು.
ಮುಖ್ಯಮಂತ್ರಿಗಳಿಗೆ ಮನವಿ
ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೋಟ್ಯಾಂತರ ರೂಗಳ ಬೆಳೆ ನಷ್ಟವಾಗಿರುವುದರಿಂದ ಮುಖ್ಯಮಂತ್ರಿಗಳು ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಮಂಗಳವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನ ರೈತರು ಸತತ ಬರಗಾಲವನ್ನು ಎದುರಿಸುತ್ತಾ ಬಂದಿದ್ದಾರೆ. 1500 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಿಕ್ಕರೂ ವಿಷಪೂರಿತವಾಗಿರುತ್ತದೆ. ಆದರೂ ರೈತರು ಹನಿಹನಿ ನೀರನ್ನೂ ಬಳಸಿ ಶ್ರಮದಿಂದ ಬೆಳೆ ಬೆಳೆದರೆ ಪ್ರಕೃತಿಯು ಸಹಕರಿಸದೇ ಶಾಪವಾಗಿ ಪರಿಣಮಿಸಿ ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯ ಮೂಲಕ ಕೋಟ್ಯಾಂತರ ರೂಗಳ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ರೈತರು ಬೆಳೆದಿದ್ದ ರೇಷ್ಮೆ, ದ್ರಾಕ್ಷಿ, ತರಕಾರಿ ಹಾಗೂ ಮನೆಗಳು ಉರುಳಿದ್ದು ರೈತರು ಪರದಾಡುವಂತಾಗಿದೆ. ಮುಖ್ಯಮಂತ್ರಿಗಳು ರೈತರ ಕಷ್ಟಕ್ಕೆ ಸ್ಪಂದಿಸಿ ಮಹಾರಾಷ್ಟ್ರ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ ರೈತರಿಗೆ ನೆರವಾಗುವಂತೆ ಕೋರಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ರೇಷ್ಮೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನಾದ್ಯಂತ ನಾಶವಾದ ಬೆಳೆಗಳ ಬಗ್ಗೆ ವರದಿಯನ್ನು ತರಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನನ್ನ ಮಿತಿಯಲ್ಲಿನ ಪರಿಹಾರದ ಹಣವನ್ನು ತಕ್ಷಣವೇ ನೀಡುತ್ತೇನೆ’ ಎಂದು ಹೇಳಿದರು.
ರೈತಮುಖಂಡರಾದ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ಮಂಜುನಾಥ್, ಆರ್.ದೇವರಾಜ್, ತ್ಯಾಗರಾಜ್, ರಾಮಚಂದ್ರ, ರವಿ, ಮುನಿರಾಜು, ಮುನಿವೆಂಕಟರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -