‘ತಾಯಿ ಮಗುವಿನ ಪ್ರೀತಿ ವಾತ್ಸಲ್ಯ ಬಾಡುವುದೂ ಅಲ್ಲ, ಮುರಿಯುವುದೂ ಅಲ್ಲ, ಕಮರುವುದೂ ಅಲ್ಲ, ಅರಳುವುದೇ ಎಲ್ಲ…’
‘ಹುಟ್ಟಿದ್ದು ಅಮ್ಮನ ಹೊಟ್ಟೆಯಲ್ಲಿ, ಬೆಳೆದದ್ದು ಅಮ್ಮನ ಕೈತುತ್ತಿನಲ್ಲಿ, ಓದಿದ್ದು ಅಮ್ಮನ ಸ್ಫೂರ್ತಿಯಲ್ಲಿ, ಈಗಲೂ ಚೆನ್ನಾಗಿದ್ದೀನಿ ಅಮ್ಮನ ಆರೈಕೆಯಲ್ಲಿ, ನಗುನಗುತ್ತಾ ಇದ್ದೀನಿ ಅಮ್ಮನ ಪ್ರೀತಿಯಲ್ಲಿ…’ ಎಂದು ಐದನೇ ತರಗತಿಯ ಕೀರ್ತನಾ ಅಮ್ಮನ ಕುರಿತಂತೆ ಭಾವಪೂರ್ಣವಾಗಿ ಮಾತನಾಡಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಪಟ್ಟಣದ ಹೊರವಲಯದ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕಿಯ ಮಾತುಗಳು ಪ್ರಶಂಸೆಗೆ ಪಾತ್ರವಾದವು.
ವೈವಿಧ್ಯಮಯವಾಗಿ ವೇಷ ಭೂಷಣಗಳನ್ನು ಧರಿಸಿ ಮಕ್ಕಳು ನಡೆಸಿಕೊಟ್ಟ ನೃತ್ಯ, ನಾಟಕ, ರೂಪಕ, ಕನ್ನಡನಾಡಿನ ಹಿರಿಮೆಯನ್ನು ಸಾರುವ ಗೀತೆಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ,‘ನಮ್ಮ ಭಾಷೆಯನ್ನು ತಾಯಿಯಂತೆ ಕಾಣಬೇಕು. ನಮ್ಮ ಭಾಷೆಗೆ ಆದ್ಯತೆ ನೀಡದಿದ್ದರೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಂಸ್ಕಾರವನ್ನು ಕಳೆದುಕೊಳ್ಳುತ್ತೇವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ‘ನಮ್ಮ ಜಿಲ್ಲೆಯು ಪಕ್ಕದ ಆಂದ್ರಪ್ರದೇಶದ ಗಡಿ ಭಾಗದಲ್ಲಿರುವುದರಿಂದ ಬಹಳಷ್ಟು ಜನರು ತೆಲುಗು ಭಾಷೆಯನ್ನು ಬಳಸುತ್ತಾರೆ. ಶಿಕ್ಷಕರು ಮಕ್ಕಳಿಗೆ ಭಾಷೆ ಕಲಿಸುವಲ್ಲಿ ಬದ್ಧತೆ ಪ್ರದರ್ಶಿಸಿದಾಗ ಕನ್ನಡ ಬಳಕೆ ಹೆಚ್ಚುತ್ತದೆ’ ಎಂದು ತಿಳಿಸಿದರು.
ಶಿಡ್ಲಘಟ್ಟ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ವ್ಯವಸ್ಥಾಪಕಿ ಹೇಮಲತಾ, ಮಾಲೂರಿನ ಬಿಜಿಎಸ್ ಸಮೂಹಗಳ ಕಾರ್ಯದರ್ಶಿ ಬೈಯ್ಯಣ್ಣ, ಪ್ರಾಂಶುಪಾಲ ಆರ್.ಮಹದೇವಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -