ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ನಾಯಕರುಗಳ ಜೀವನವನ್ನು ಆದರ್ಶವಾಗಿಸಿಕೊಂಡಲ್ಲಿ ವಿದ್ಯಾರ್ಥಿಗಳು ಉತ್ತಮವಾದ ಚಾರಿತ್ರ್ಯವನ್ನು ರೂಪಿಸಿಕೊಳ್ಳಬಹುದು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪೂರ್ಣಾನಂದಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿವಿವೇಕಾನಂದ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ಸ್ವಾಮಿ ವಿವೇಕಾನಂದರ ೧೫೩ ನೇ ವರ್ಷದ ಜನ್ಮದಿನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಯ ದೆಸೆಯಲ್ಲಿಯೆ ಮಕ್ಕಳು ನಿರಂತರವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಕೆಟ್ಟ ವ್ಯಸನಗಳಿಂದ ದೂರವುಳಿದು ಏಕಾಗ್ರತೆಯಿಂದ ತಮ್ಮ ಗುರಿಯನ್ನು ಮುಟ್ಟಲು ಸಾಧನೆ ಮಾಡಬೇಕು. ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಸಮಾಜ ಸುಧಾರಕರಾಗಬೇಕು. ಜೀವನ ಚರಿತ್ರೆಗಳನ್ನು ಓದದವನು ಚರಿತ್ರೆಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗುವುದಿಲ್ಲ. ಯುವಜನತೆ ತಮ್ಮಲ್ಲಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಸದೃಢವಾದ ದೇಶವನ್ನು ಕಟ್ಟುವಲ್ಲಿ ಆಸಕ್ತರಾಗಬೇಕು. ಪ್ರತಿಭೆಗಳನ್ನು ಹೊರಗೆಳೆಯುವಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ಮಕ್ಕಳಲ್ಲಿರುವ ಕೌಶಲ್ಯಗಳನ್ನು ಗುರ್ತಿಸಬೇಕು. ಯಾವುದೇ ಕಾರ್ಯವನ್ನು ಮಾಡಬೇಕಾದರೆ ಏಕಾಗ್ರತೆಯ ಜೊತೆಗೆ ನಂಬಿಕೆ ಸ್ಥಿರವಾಗಿರಬೇಕು. ಶ್ರದ್ದೆ, ಸಹನೆ, ಸತತವಾದ ಪ್ರಯತ್ನದ ಮುಖಾಂತರ ಆತ್ಮವಿಶ್ವಾಸದಿಂದ ಉತ್ತಮವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಹಾನ್ ನಾಯಕರ ವಿಚಾರಧಾರೆಗಳು ಮಕ್ಕಳಿಗೆ ಮನದಟ್ಟು ಮಾಡುವಂತಹ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದರು.
ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾಗಿದ್ದ ಮಕ್ಕಳಿಗೆ ಪ್ರಶಸ್ತಿ ಪತ್ರಗಳೊಂದಿಗೆ ಪುರಸ್ಕಾರ ನೀಡಲಾಯಿತು.
ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ.ರಾಮಾಂಜಿನಪ್ಪ, ಕಾರ್ಯದರ್ಶಿ ಶಿವಣ್ಣ, ಖಜಾಂಚಿ ಲಕ್ಷ್ಮೀಪತಿ, ಎಂ.ನಾಗರಾಜ್, ಎಂ.ಎನ್.ಗೋಪಾಲಪ್ಪ, ಸಿ.ನಾರಾಯಣಸ್ವಾಮಿ, ಸಿ.ಎಂ.ದೇವರಾಜ್, ಎಂ.ಕೆ.ಚಂದ್ರಶೇಖರ್, ಪಿಳ್ಳವೆಂಕಟಸ್ವಾಮಪ್ಪ, ಪ್ರಾಂಶುಪಾಲ ಜಿ.ಎಂ.ಚಂದ್ರಕುಮಾರ್, ಮುಖ್ಯಶಿಕ್ಷಕ ನರಸಿಂಹಮೂರ್ತಿ, ನಾಗರತ್ನಮ್ಮ, ಕೆ.ಎಂ.ಚಂದ್ರಶೇಖರ್, ವಿ.ಶ್ಯಾಮಲ, ಜಿ.ಎನ್.ನಿರ್ಮಲ, ಜಿ.ಟಿ.ವಿಜಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.