ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದು, ಚುನಾವಣೆಗಾಗಿ ನೇಮಕವಾಗಿರುವ ಎಲ್ಲಾ ಅಧಿಕಾರಿಗಳು ಬದ್ಧತೆಯಿಂದ ತಮ್ಮ ಕಾರ್ಯನಿರ್ವಹಣೆ ಮಾಡಬೇಕು ಎಂದು ತಹಶೀಲ್ದಾರ್ ಮನೋರಮಾ ತಿಳಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಚುನಾವಣೆಯ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ೩೦ ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಸೂಕ್ಷ್ಮಮತಗಟ್ಟೆಗಳು ೧೮, ಅತಿಸೂಕ್ಷ್ಮ ಮತಗಟ್ಟೆಗಳು ೧೨ ಎಂದು ಗುರುತಿಸಲಾಗಿದೆ. ಈ ಚುನಾವಣೆಯಲ್ಲಿ ಗ್ರಾಮ ಪಂಚಾಯತಿಗಳ ಸದಸ್ಯರು, ನಗರಸಭಾ ಸದಸ್ಯರು, ನಾಮಿನಿ ಸದಸ್ಯರುಗಳು, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳ ಸದಸ್ಯರುಗಳು ಮತಚಲಾವಣೆ ಮಾಡುತ್ತಾರೆ. ಒಟ್ಟು ೪೭೩ ಮಂದಿ ಮತದಾನ ಮಾಡಲಿದ್ದು, ಗ್ರಾಮ ಪಂಚಾಯತಿಗಳ ಕೇಂದ್ರಸ್ಥಾನಗಳಲ್ಲಿ ಆಯಾ ಪಂಚಾಯತಿಗಳ ಸದಸ್ಯರುಗಳು ಮತಚಲಾವಣೆ ಮಾಡುತ್ತಾರೆ. ಜಿ.ಪಂ. ಸದಸ್ಯರು ಹಾಗೂ ತಾ.ಪಂ.ಸದಸ್ಯರುಗಳು ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ತೆರೆಯಲಾಗುವ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಲಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಾಗ್ರತೆವಹಿಸಬೇಕು, ತಾಲ್ಲೂಕಿನ ಮಟ್ಟದಲ್ಲಿ ಜಾಗೃತಿದಳವನ್ನು ರಚನೆ ಮಾಡಿದ್ದು, ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್, ಅಬಕಾರಿ ಇಲಾಖಾಧಿಕಾರಿ ಹಾಗೂ ಪಿ.ಎಸ್.ಐ.ಗಳ ತಂಡವನ್ನು ರಚನೆ ಮಾಡಲಾಗಿದೆ. ಹೋಬಳಿ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಎಇಇ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡವನ್ನು ರಚನೆ ಮಾಡಿ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಲಾಗುತ್ತಿದೆ ಎಂದರು.
ತೋಟಗಾರಿಕಾ ಸಹಾಯಕ ನಿರ್ದೇಶಕ ಆನಂದ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಎಇಇ ಶಿವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಉಪತಹಶೀಲ್ದಾರ್ ವಾಸುದೇವಮೂರ್ತಿ, ಮುನಿಕೃಷ್ಣಪ್ಪ, ಚುನಾವಣೆ ಶಾಖೆಯ ನಾಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -