‘ಕುಡಿಯಲು ನೀರಿಲ್ಲ, ತಿಂಡಿ, ಊಟದ ವ್ಯವಸ್ಥೆ ಇಲ್ಲ. ಶೌಚಾಲಯದ ಸಮಸ್ಯೆಯಿದೆ. ದೂರದೂರುಗಳಿಂದ ಬಂದವರಿಗೆ ಮೂಲಭೂತ ಸೌಕರ್ಯಗಳಿಲ್ಲ. ದಿನಗೂಲಿ ನೌಕರರಿಗಿಂತ ಹೀನಾಯವಾಗಿ ಶಿಕ್ಷಕರನ್ನು ನಡೆಸಿಕೊಳ್ಳುತ್ತಿದ್ದಾರೆ’ ಎಂದು ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಶಿಕ್ಷಕರು ಚುನಾವಣಾ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಘಟನೆ ಸೋಮವಾರ ನಡೆಯಿತು.
ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಚುನಾವಣಾ ಪರಿಕರಗಳ ವಿತರಣೆ ಮತ್ತು ನಿಯೋಜಿತ ಮತಗಟ್ಟೆಗಳಿಗೆ ಕಳುಹಿಸುವ ಸಂದರ್ಭದಲ್ಲಿ ಶಿಕ್ಷಕರು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
‘ಇತರ ತಾಲ್ಲೂಕಿಗಳಲ್ಲಿ 1800 ರೂಪಾಯಿಗಳನ್ನು ಚುನಾವಣೆಗೆ ನಿಯೋಜಿಸಿದವರಿಗೆ ನೀಡಿದರೆ, ನಮ್ಮ ತಾಲ್ಲೂಕಿನಲ್ಲಿ ಕೇವಲ 1100 ರೂಪಾಯಿಗಳನ್ನು ನೀಡುತ್ತಿದ್ದಾರೆ. ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಲ್ಲದ ಕಾರಣ ಹೋಟೆಲ್ಗಳಲ್ಲಿ ತಿನ್ನಬೇಕಾಗಿದೆ’ ಎಂದು ಆರೋಪಿಸಿ ಪ್ರತಿಭಟಿಸಿದರು.
ಚುನಾವಣಾ ವೀಕ್ಷಕಿ ಲಕ್ಷ್ಮಮ್ಮ ಮತ್ತು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ, 150 ರೂಪಾಯಿಗಳು ಊಟದ ಭತ್ಯೆಯನ್ನು ನೀಡುವುದಾಗಿ ತಿಳಿಸಿದರು.
ನಂತರ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಶಿಕ್ಷಕರು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.
- Advertisement -
- Advertisement -
- Advertisement -
- Advertisement -