ನಗರದಲ್ಲಿ ಬಾನುವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ ಎಂಬ ವದಂತಿ ನಾಗರೀಕರಲ್ಲಿ ಆತಂಕವನ್ನುಂಟು ಮಾಡಿದೆ.
ನಗರದ ಶಂಕರಮಠ ರಸ್ತೆಯ ಶಾಮಣ್ಣ ಬಾವಿ (ಕಲ್ಯಾಣಿ) ಯೊಳಗೆ ಭಾನುವಾರ ಬೆಳಗ್ಗೆ ಚಿರತೆಯೊಂದು ಕಂಡುಬಂದಿದೆ ಎಂಬ ದಾರಿಹೋಕರ ವದಂತಿಯಿಂದ ನಗರದ ನೂರಾರು ಸಾರ್ವಜನಿಕರು ಸೇರಿದಂತೆ ಮಕ್ಕಳು, ಮಹಿಳೆಯರು ಬಾವಿಯ ಸುತ್ತ ಸೇರಿದ್ದರು.
ನಗರದ ಮಧ್ಯಭಾಗದಲ್ಲಿರುವ ಶಂಕರಮಠ ರಸ್ತೆಯ ಶಾಮಣ್ಣ ಬಾವಿಯಲ್ಲಿ ನೀರು ಭತ್ತಿಹೋಗಿದೆಯಾದರೂ ಹಿಂದೆ ಗೌಡನಕೆರೆಯಿಂದ ಬಾವಿಗೆ ನೀರು ಬರಲು ಹಿರಿಯರು ನಿರ್ಮಿಸಿದ್ದ ಸುರಂಗ ಮಾರ್ಗದೊಳಕ್ಕೆ ನಾಯಿ ಮರಿಯೊಂದನ್ನು ಕಚ್ಚಕೊಂಡು ಚಿರತೆ ಹೋಯಿತು ಎಂದು ದಾರಿಯಲ್ಲಿ ಹೋಗುತ್ತಿದ್ದವರಾರೋ ಹೇಳಿದ್ದರ ಹಿನ್ನಲೆಯಲ್ಲಿ ಬಾಯಿಂದ ಬಾಯಿಗೆ ಈ ಸುದ್ದಿ ಹಬ್ಬಿ ನೂರಾರು ಮಂದಿ ಸಾರ್ವಜನಿಕರು ಬಾವಿಯ ಬಳಿ ನೆರೆದಿದ್ದಾರೆ.
ವಿಷಯ ತಿಳಿದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಾದರೂ ಯಾವುದೇ ಫಲಕಾರಿಯಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಕಾರ ತಾಲೂಕಿನಲ್ಲಿ ಈವರೆಗೂ ಯಾವುದೇ ಚಿರತೆ ಕಂಡು ಬಂದ ನಿದರ್ಶನಗಳಿಲ್ಲ. ಆದರೂ ಇದನ್ನು ನಿರ್ಲಕ್ಷಿಸುವಂತಿಲ್ಲ. ಈಗಾಗಲೆ ಟಾರ್ಚ್ ಮೂಲಕ ಸುರಂಗದೊಳಕ್ಕೆ ಬೆಳಕು ಬಿಟ್ಟು ನೋಡಿದ್ದೇವೆ. ಏನೂ ಗೋಚರಿಸುತ್ತಿಲ್ಲ. ಸಂಜೆಯೊಳಗೆ ಬೋನು ಹಾಗು ಬಲೆ ತರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎನ್ನುತ್ತಾರೆ.
ಒಟ್ಟಾರೆ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ನಗರದ ನಾಗರೀಕರು ಭಾನುವಾರದ ರಜೆಯನ್ನು ಆತಂಕದಿಂದಲೇ ಕಳೆಯುವಂತಾಯಿತು.