Home News ಗ್ರಾಮಾಂತರ ಠಾಣೆಯ ಮುಂದೆ ಪ್ರತಿಭಟನೆ

ಗ್ರಾಮಾಂತರ ಠಾಣೆಯ ಮುಂದೆ ಪ್ರತಿಭಟನೆ

0

ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ ಉಲ್ಲ ವಿರುದ್ಧ ಶಾಸಕ ಎಂ.ರಾಜಣ್ಣ ಸೇರಿದಂತೆ ನೂರಾರು ಮಂದಿ ಗ್ರಾಮಾಂತರ ಠಾಣೆಯ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ತಾದೂರು ಗೇಟ್ ಬಳಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಶನಿವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸುವಾಗ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ ಉಲ್ಲ ಅವಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜನ್ಯದಿಂದ ವರ್ತಿಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
19apr6ಈ ಸಂದರ್ಭದಲ್ಲಿ ಶಾಸಕ ಎಂ.ರಾಜಣ್ಣ ಮಾತನಾಡಿ,‘ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ ಉಲ್ಲ ಅವರ ವಿರುದ್ಧ ಸಾರ್ವಜನಿಕರಿಂದ ಹಲವಾರು ದೂರುಗಳಿಂದ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ನಾನೇ ಅವರಿಗೆ ದೂರವಾಣಿ ಮೂಲಕ ಮಾತನಾಡಿದ್ದರೂ ಸಹ ಪ್ರಯೋಜನವಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೂ ದೂರು ನೀಡಿದ್ದೇನೆ. ಇಂದು ಎಲ್ಲಾ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಬಂದ್ ಆಚರಿಸುತ್ತಿದ್ದು, ನನ್ನ ಕ್ಷೇತ್ರದ ತಾದೂರು, ಬಸವಾಪಟ್ಟಣ ಹಾಗೂ ವೆಂಕಟಾಪುರ ಗ್ರಾಮದ ಯುವಕರು ಪ್ರತಿಭಟಿಸುವಾಗ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ ಉಲ್ಲ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೌರ್ಜನ್ಯದಿಂದ ವರ್ತಿಸಿರುವುದನ್ನು ಖಂಡಿಸಿ ಪ್ರತಿಭಟಿಸುತ್ತಿದ್ದೇವೆ. ಮೇಲಧಿಕಾರಿಗಳು ಸ್ಥಳಕ್ಕೆ ಬಂದು ಅವರನ್ನು ವರ್ಗಾವಣೆ ಮಾಡುವ ತನಕ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿ ಡಿ.ವೈ.ಎಸ್.ಪಿ ಸಣ್ಣತಿಮ್ಮಯ್ಯ ಮಾತನಾಡಿ, ಶಾಸಕರನ್ನು ಹಾಗೂ ಪ್ರತಿಭಟನಾ ನಿರತರನ್ನು ಮನವೊಲಿಸಲಾಗುವುದು. ಈ ವಿಷಯದ ಬಗ್ಗೆ ಮೇಲಧಿಕಾರಿಗಳಿಗೆ ಸಂಪೂರ್ಣ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪುರಸಭಾ ಸದಸ್ಯ ಲಕ್ಷ್ಮಣ, ತಾದೂರು ರಘು, ಮಂಜುನಾಥ, ಮುಖಂಡರಾದ ಮೇಲೂರು ರವಿಕುಮಾರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆರ್.ಎ.ಉಮೇಶ್, ಕೆ.ಮಂಜುನಾಥ್, ಮಳಮಾಚನಹಳ್ಳಿ ರಾಜಶೇಖರ್, ಮಳ್ಳೂರು ರಾಜೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.