ತಾಲ್ಲೂಕಿನ ಕೊತ್ತನೂರು ಗ್ರಾಮಕ್ಕೆ ಅಂಡರ್‌ಪಾಸ್ ಮುಲಕ ಪ್ರವೇಶಿಸುವಾಗ ರೈಲ್ವೆ ಇಲಾಖೆಯಿಂದ ನಿರ್ಮಾಣ ಮಾಡಲಾಗಿರುವ ಕಬ್ಬಿಣದ ಗರ್ಡರ್ ಒಂದು ಬದಿಯಲ್ಲಿ ಮುರಿದು, ವಾಲಿಕೊಂಡ ಕಾರಣದಿಂದ ಹಾಲು ಸಾಗಿಸುವ ಟ್ಯಾಂಕರ್ ಗ್ರಾಮಕ್ಕೆ ಬರದಂತಾಗಿದೆ.
ಕೊತ್ತನೂರು ಗ್ರಾಮದ ಹಾಲು ಶಿಥಲೀಕರಣ ಕೇಂದ್ರಕ್ಕೆ ಕದಿರಿನಾಯಕನಹಳ್ಳಿ, ಪಿಂಡಿಪಾಪನಹಳ್ಳಿ, ಹಾಗೂ ಕೊತ್ತನೂರು ಗ್ರಾಮಗಳ ಹಾಲು ಉತ್ಪಾದಕರು ಪ್ರತಿದಿನ ಹಾಲನ್ನು ತಂದು ಕೊಡುತ್ತಾರೆ. ಪ್ರತಿದಿನ 3,600 ಲೀಟರ್ ಹಾಲು ಸಂಗ್ರಹವಾಗುವ ಈ ಕೇಂದ್ರದಿಂದ ಹಾಲನ್ನು ಟ್ಯಾಂಕರ್ ಮೂಲಕ ಕೋಲಾರಕ್ಕೆ ಹಾಲನ್ನು ಸಾಗಿಸಲಾಗುತ್ತದೆ.
ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಿಂದ ಕೊತ್ತನೂರು ಗ್ರಾಮಕ್ಕೆ ಇರುವ ಸಂಪರ್ಕ ರಸ್ತೆಯ ನಡುವೆ ರೈಲ್ವೆ ಹಳಿಯಿರುವುದರಿಂದ ಇಲ್ಲಿ ಅಂಡರ್‌ಪಾಸ್ ನಿರ್ಮಿಸಲಾಗಿದೆ. ಅಂಡರ್‌ಪಾಸ್ ಅಳತೆಗಿಂತ ಎತ್ತರದ ವಾಹನಗಳು ಹೋಗದಂತೆ ಮೊದಲೇ ತಡೆಯಲು ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿ ಕಬ್ಬಿಣದ ಗರ್ಡರ್‌ಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಒಂದು ಬದಿಯಲ್ಲಿ ಒಂದು ಕಬ್ಬಿಣದ ರಾಡ್ ಕಳಚಿರುವುದರಿಂದ ಒಂದು ಭಾಗ ವಾಲಿದೆ. ಇದರಿಂದಾಗಿ ಪ್ರತಿ ದಿನ ಗ್ರಾಮಕ್ಕೆ ಬರಬೇಕಾದ ಹಾಲು ಸಾಗಿಸುವ ಟ್ಯಾಂಕರ್ ಬರದಂತಾಗಿದೆ.
ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದಿರುವುದರಿಂದ ಅಪರೂಪಕ್ಕೆ ಮದುವೆ ಮುಂತಾದ ಕಾರ್ಯಕ್ರಮಗಳಿಗೆಂದು ಬರಬೇಕಾದ ಬಸ್ ಕೂಡ ಈಗ ಪ್ರವೇಶಿಸದಂತಾಗಿದೆ. ಹಾಲು ಸಾಗಿಸುವ ಟ್ಯಾಂಕರ್ ಪಿಂಡಿಪಾಪನಹಳ್ಳಿ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಹಾದು ಜಮೀನೊಂದರ ಮೂಲಕ ಪ್ರತಿ ದಿನ ಕೊತ್ತನೂರಿಗೆ ಈಗ ಬರುತ್ತಿದ್ದು, ಬೆಳೆ ಇಡಲು ಹೊರಟಿರುವ ಜಮೀನಿನವರ ಪ್ರತಿರೋಧವನ್ನೂ ಎದುರಿಸುತ್ತಿದೆ.
‘ರೈಲ್ವೆ ಅಧಿಕಾರಿಗಳು ತಾವು ನಿರ್ಮಿಸಿರುವ ಅಂಡರ್‌ಪಾಸ್ ಮುಂತಾದವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ನಮ್ಮ ಗ್ರಾಮಕ್ಕೆ ಪ್ರತಿದಿನ ಹಾಲು ಸಾಗಿಸುವ ಟ್ಯಾಂಕರ್ ಬರಲೇ ಬೇಕು. ಈ ಗರ್ಡರ್ ಸರಿಯಾಗಿ ನಿರ್ಮಿಸದ ಕಾರಣ ಮುರಿದು ಬಿದ್ದಿದ್ದು, ನಮಗೆಲ್ಲಾ ತೊಂದರೆಯಾಗಿದೆ. ಈಗೇನೋ ಮಳೆ ಸರಿಯಾಗಿ ಆಗದಿರುವುದರಿಂದ ಪಿಂಡಿಪಾಪನಹಳ್ಳಿಯವರ ಜಮೀನಿನಲ್ಲಿ ಟ್ಯಾಂಕರ್ ಬರುತ್ತಿದೆ. ಅವರು ಈಗ ಬೆಳೆ ಇಡಲು ಹೊರಟಿದ್ದಾರೆ. ಇದಕ್ಕೆ ಪರಿಹಾರವಾಗಿ ರೈಲ್ವೆ ಇಲಾಖೆಯವರು ಶೀಘ್ರವಾಗಿ ಗರ್ಡರ್ ಸರಿಪಡಿಸಿ ನಮಗಾಗಿರುವ ತೊಂದರೆಯನ್ನು ನಿವಾರಿಸಬೇಕು’ ಎಂದು ಕೊತ್ತನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.