Home News ಗ್ರಂಥಾಲಯವನ್ನು ಮಕ್ಕಳು ಮುಕ್ತವಾಗಿ ಬಳಸುವಂತಾಗಲಿ

ಗ್ರಂಥಾಲಯವನ್ನು ಮಕ್ಕಳು ಮುಕ್ತವಾಗಿ ಬಳಸುವಂತಾಗಲಿ

0

ಶಾಲೆಯ ಗ್ರಂಥಾಲಯವನ್ನು ಮಕ್ಕಳು ಮುಕ್ತವಾಗಿ ಬಳಸುವಂತೆ ಮಾರ್ಪಡಿಸಬೇಕು ಎಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಬುಡ್ಡೂಸಾಬಿ ತಿಳಿಸಿದರು.
ತಾಲ್ಲೂಕಿನ ಸಾದಲಿಯ ಶ್ರೀ ರಾಜೀವ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕಸಾಪ ವತಿಯಿಂದ ‘ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ’ ಕಾರ್ಯಕ್ರಮದಡಿಯಲ್ಲಿ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.
ಮಕ್ಕಳು ಸ್ವತಃ ಪುಸ್ತಕ ತೆಗೆದುಕೊಳ್ಳುವ, ಜೋಡಿಸುವ, ಮತ್ತು ಯಾವುದೇ ಗ್ರಂಥದ ಆಯ್ಕೆಗೆ ಮುಕ್ತ ವಾತಾವರಣವಿರಬೇಕು. ಶಾಲೆಯ ಗ್ರಂಥಾಲಯದ ಪುಸ್ತಕದಲ್ಲಿನ ವಿಷಯಗಳನ್ನು ಆಧರಿಸಿ ಚರ್ಚೆ, ಪ್ರಬಂಧ. ಭಾಷಣ ಮತ್ತು ಯೋಜನೆಗಳನ್ನು ರೂಪಿಸಲು ವಿವಿಧ ಸ್ಪರ್ಧೆ ಏರ್ಪಡಿಸುವುದು ಸೂಕ್ತ. ಪ್ರತೀ ಶೈಕ್ಷಣಿಕ ವರ್ಷದ ಮೊದಲ ಮಾಸದಲ್ಲಿ ಒಂದು ದಿನ ಶಾಲೆಯ ಗ್ರಂಥಾಲಯದಲ್ಲಿರುವ ಪುಸ್ತಕಗಳ ಪ್ರದರ್ಶನ ಏರ್ಪಡಿಸಿ ಶಾಲೆಯ ಮಕ್ಕಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು, ಅದರಲ್ಲಿರುವ ವಿವರಗಳ ಸಂಕ್ಷಿಪ್ತ ಪರಿಚಯ ಮಾಡಬೇಕು. ಮಕ್ಕಳೇ ಸ್ವತಃ ಪುಸ್ತಕ ಆಯ್ಕೆಮಾಡಿಕೊಳ್ಳುವಂತೆ ಮತ್ತು ಮಕ್ಕಳೇ ಗ್ರಂಥಾಲಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಗ್ರಂಥಾಲಯವು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುತ್ತದೆ. ಶಾಲೆಯ ಅವಧಿಯಲ್ಲಿ ಓದಿದ ವಿಷಯಗಳನ್ನು ಮುಂದೊಂದು ದಿನ ಅದೇ ವಿಷಯ ಬಂದಾಗ ಸಂಬಂಧ ಕಲ್ಪಿಸಿ ವಿಷಯವನ್ನು ಹೋಲಿಕೆ ಮಾಡಲು ಸಹಾಯಕವಾಗುತ್ತದೆ. ಮಗುವಿನ ಕೂತೂಹಲವನ್ನು ತಣಿಸುವುದರ ಮೂಲಕ ಬೌದ್ಧಿಕ ಬೆಳವಣಿಗೆಗೆ ಗ್ರಂಥಾಲಯ ಸಹಾಯಕವಾಗಬಲ್ಲದು ಮತ್ತು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ನಿರಂತರ ಅಧ್ಯಯನದ ಆಸಕ್ತಿ ಬೆಳೆಸಲು ಸಹಾಯವಾಗುತ್ತದೆ. ಇದಕ್ಕೆ ಪೂರಕವಾಗಿ ತಾಲ್ಲೂಕು ಕಸಾಪ ತಾಲ್ಲೂಕಿನ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಿದೆ ಎಂದು ವಿವರಿಸಿದರು.
ತಾಲ್ಲೂಕಿನ ಉಪ್ಪುಕುಂಟಹಳ್ಳಿ ಸರ್ಕಾರಿ ಶಾಲೆ, ಸಾದಲಿ ಸ.ಹಿ.ಪ್ರಾ. ಶಾಲೆ, ಶ್ರೀಶಾಲವಿ ಹಿರಿಯ ಪ್ರಾಥಮಿಕ ಶಾಲೆ, ಸಾದಲಿಯ ಸರ್ಕಾರಿ ಪ್ರೌಢಶಾಲೆ, ಸಾದಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಗ್ರಂಥಾಲಯಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕಗಳನ್ನು ನೀಡಿದರು.
ಎಸ್.ದೇವಗಾನಹಳ್ಳಿ, ಎಸ್.ಗುಂಡ್ಲಹಳ್ಳಿ, ಸೊಣ್ಣಗಾನಹಳ್ಳಿ, ಕೋಟಗಲ್, ಪೂಸಗಾನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೂ ಪುಸ್ತಕಗಳನ್ನು ನೀಡುವುದಾಗಿ ಅವರು ತಿಳಿಸಿದರು. ತಾಲ್ಲೂಕು ಕಸಾಪ ಸಾದಲಿ ಹೋಬಳಿ ಘಟಕದ ಅಧ್ಯಕ್ಷ ಜಗದೀಶ್ ಬಾಬು ಹಾಜರಿದ್ದರು.