ಹಾಲು ಒಕ್ಕೂಟದಿಂದ ಸಿಗುವಂತಹ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡು ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆಗೆ ಇನ್ನೂ ಹೆಚ್ಚು ಒತ್ತು ನೀಡಬೇಕು ಎಂದು ಕೋಚಿಮುಲ್ ಅಧ್ಯಕ್ಷ ಜಿ.ಕಾಂತರಾಜು ಹೇಳಿದರು.
ಕೋಚಿಮುಲ್ ಶಿಬಿರ ಕಚೇರಿ ವತಿಯಿಂದ ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಹಾಗು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ಪಾದಕರ ಶ್ರೇಯೋಭಿವೃದ್ಧಿ, ಹಾಲು ಉತ್ಪಾದಕರ ಮಕ್ಕಳ ಶಿಕ್ಷಣ, ಬೆಂಬಲ ಬೆಲೆಗಳ ಮುಖಾಂತರ ಹಾಲು ಉತ್ಪಾದಕರಿಗೆ ಒಕ್ಕೂಟ ಉತ್ತೇಜಿಸುತ್ತಿದೆ. ತಾಲ್ಲೂಕಿನಲ್ಲಿ ಶೇ. ೯೬ ರಷ್ಟು ಹಾಲಿನ ಗುಣಮಟ್ಟವನ್ನು ಕಾಯ್ದುಕೊಂಡಿರುವುದರೊಂದಿಗೆ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನದಲ್ಲಿರುವುದು ಶ್ಲಾಘನೀಯ ಎಂದರು.
ಮುಂಬರುವ ದಿನಗಳಲ್ಲಿ ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿವೇತನ ಸೇರಿದಂತೆ ವಸತಿನಿಲಯ ನಿರ್ಮಿಸಿ ಇನ್ನೂ ಹೆಚ್ಚಿನ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಒಕ್ಕೂಟ ಮಾಡಲಿದೆ.
ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಸುಮಾರು ೧೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೈರಿ ನಿರ್ಮಾಣ ಕಾರ್ಯ ಮುಗಿದಿದ್ದು ಯಂತ್ರೋಪಕರಣ ಅಳವಡಿಸಲಾಗುತ್ತಿದೆ. ಮುಂಬರುವ ಜನವರಿ ತಿಂಗಳಲ್ಲಿ ಉದ್ಘಾಟನೆಯಾಗಲಿರುವ ಈ ಮೆಗಾಡೈರಿಯಿಂದ ಈ ಬಾಗದ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಗುಣಮಟ್ಟದ ಹಾಲು ಪೂರೈಕೆಯಲ್ಲಿ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿರುವ ಶಿಡ್ಲಘಟ್ಟದಿಂದ ಪ್ರತಿನಿತ್ಯ ೧ ಲಕ್ಷ ೫ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಶೇ. ೯೫ ರಷ್ಟು ಗುಣಮಟ್ಟದ ಹಾಲು ಪೂರೈಸುವುದರೊಂದಿಗೆ ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತಾಗಲು ಹಾಲು ಉತ್ಪಾದಕರು ಸೇರಿದಂತೆ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಆಡಳಿತ ಮಂಡಳಿ ಸದಸ್ಯರು ಕಾರಣೀಕರ್ತರು ಎಂದರು.
ತಮ್ಮ ಎರಡು ವರ್ಷದ ಅಧಿಕಾರಾವಧಿಯಲ್ಲಿ ನಗರದ ಶಿಭಿರ ಕಚೇರಿಗೆ ೪ ಗುಂಟೆ ಸ್ವಂತ ಸ್ಥಳ ಗುರುತಿಸಿದ್ದು ಕಟ್ಟಡ ಕಾಮಗಾರಿ ಶುರುಮಾಡಲು ಈಗಾಗಲೇ ಸುಮಾರು ೬೫ ಲಕ್ಷ ಹಣ ಬಿಡುಗಡೆಯಾಗಿದ್ದು ಕಾಮಗಾರಿ ತ್ವರಿತವಾಗಿ ಶುರುವಾಗಲಿದೆ ಎಂದರು.
ತಾಲ್ಲೂಕಿನ ಹಾಲು ಉತ್ಪಾದಕರು ನೀಡುವಂತಹ ಒಂದು ಲೀಟರ್ ಹಾಲಿಗೆ ೧೦ ಪೈಸೆಯಂತೆ ದತ್ತಿ ನಿಧಿಗೆ ಬರುವಂತಹ ಹಣದಲ್ಲಿ ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೮ ನೇ ತರಗತಿಯ ಸುಮಾರು ೧,೩೦೦ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ಗಳು ಸೇರಿದಂತೆ ಮರಣಹೊಂದಿರುವ ಹಾಲು ಉತ್ಪಾದಕರ ವಾರಸುದಾರರಿಗೆ ತಲಾ ೫,೦೦೦ ರೂಗಳಂತೆ ೨೨ ಮಂದಿಗೆ ಚೆಕ್ಕುಗಳನ್ನು ವಿತರಣೆ ಹಾಗೂ ತಾಲ್ಲೂಕಿನ ೫೬ ಸಂಘಗಳಿಗೆ ಎನ್ಡಿಪಿ ಯೋಜನೆಯಡಿ ಒಂದು ಬೀರು ಮತ್ತು ತಲಾ ಐದು ಕುರ್ಚಿಗಳನ್ನು ವಿತರಿಸಲಾಯಿತು.
ತಾಲ್ಲೂಕಿನ ಸುಮಾರು ೨೩ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳನ್ನು ಉತ್ತಮ ಸಹಕಾರ ಸಂಘಗಳು ಎಂದು ಗುರುತಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಗು ನೌಕರರ ಸಮಸ್ಯೆಗಳ ಬಗ್ಗೆ ಕಾರ್ಯದರ್ಶಿ ಗೋವಿಂದರಾಜು ಮಾತನಾಡಿದರು.
ಕೋಚಿಮುಲ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಎ.ಜಿ.ಲೋಕೇಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಮುಖಂಡರಾದ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ರಾಮಲಿಂಗಾರೆಡ್ಡಿ, ಡಿ.ಪಿ.ನಾಗರಾಜ್, ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕ ಗೋವಿಂದರಾಜು, ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ಚಂದ್ರೇಗೌಡ, ಕಾರ್ಯದರ್ಶಿ ರಾಮದಾಸ್, ಶಿಡ್ಲಘಟ್ಟ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಹನುಮಂತರಾವ್, ಸುರೇಶ್ಬಾಬು, ಅಮರೇಶ್ ಮತ್ತಿತರರು ಹಾಜರಿದ್ದರು.