ಯಾವುದೇ ಧರ್ಮದ ಜನರ ಭಾವನೆಗಳಿಗೆ ನೋವುಂಟು ಮಾಡದೇ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸುವಂತಾಗಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಭಾರಿ ಪೊಲೀಸ್ ವರಿಷ್ಟಾಧಿಕಾರಿ ಕೋರವಾರ ಹೇಳಿದರು.
ನಗರದಲ್ಲಿ ಈದ್‍ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಹಾರಿಸಿದ್ದ ಧ್ವಜಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಶುರುವಾದ ಗುಂಪುಘರ್ಷಣೆಯ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ ಠಾಣೆಯಲ್ಲಿ ಶಾಂತಿಸಭೆ ಏರ್ಪಡಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಧರ್ಮಗಳ ನಾಗರೀಕರು ಪ್ರೀತಿ ವಿಶ್ವಾಸಗಳಿಂದ ಬದುಕಿ ಬಾಳುವುದು ಒಳಿತು. ಆಯಾ ಧರ್ಮಗಳ ಮೇಲಿರುವ ನಂಬಿಕೆ ಅವರ ಮಟ್ಟಿಗೆ ದೊಡ್ಡದಾಗಿದ್ದರೂ ಕೂಡಾ ಎಲ್ಲಾ ಧರ್ಮದ ಜನರು ಮಾನವೀಯತೆಯ ನೆಲೆಗಟ್ಟಿನಲ್ಲಿ ಬದುಕಿ ಬಾಳಬೇಕಾಗಿದೆ ಎಂದರು.
ಯಾವುದೇ ಧರ್ಮ ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ ಹಾಗಾಗಿ ಎಲ್ಲರೂ ಸಮಾಜದ ಇತರರ ಕೋಮಿನವರ ವಿಶ್ವಾಸ ಗಳಿಸುವುದರೊಂದಿಗೆ ಪ್ರೀತಿಯಿಂದ ಬದುಕು ನಡೆಸಬೇಕು ಎಂದರು.
ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದಾಗ ಮುಖಂಡರು ಒಂದೆಡೆ ಕುಳಿತು ಸಮಾಲೋಚನೆಯ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕೆ ಹೊರತು ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಿಕೊಂಡು ಮತೀಯ ಹೆಸರಿನಲ್ಲಿ ಸಮಾಝದ ಸ್ವಾಸ್ಥ್ಯ ಕೆಡಿಸುವುದು ಸರಿಯಲ್ಲ ಎಂದರು.
ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಸೇರಿದಂತೆ ಧಾರ್ಮಿಕ ಸಮಸ್ಯೆಗಳು ಎದುರಾದಾಗ ಮುಖಂಡರು ಬಂದು ಠಾಣೆಯಲ್ಲಿ ದೂರು ದಾಖಲಿಸಿ ಒಂದು ವೇಳೆ ಸ್ಥಳೀಯ ಪೋಲೀಸರು ನಿಮ್ಮ ದೂರಿಗೆ ಸ್ಪಂದಿಸಲಿಲ್ಲ ಎಂದಾದರೆ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಅದು ಬಿಟ್ಟು ದೂರು ನೀಡಲು ನೂರಾರು ಮಂದಿಯನ್ನು ಹಿಂದೆ ಹಾಕಿಕೊಂಡು ಬಂದು ಠಾಣೆಯ ಮುಂದೆ ಪ್ರತಿಭಟನೆ ಮಾಡುವುದು ತರವಲ್ಲ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದ ಅವರು ಪ್ರತಿಯೊಂದಕ್ಕೂ ಪೋಲೀಸರನ್ನು ಗುರಿ ಮಾಡುವುದನ್ನು ಬಿಟ್ಟು ನಗರದಲ್ಲಿ ಶಾಂತಿ ಕಾಪಾಡಲು ನಾಗರೀಕರು ಪೋಲೀಸರೊಂದಿಗೆ ಸಹಕರಿಸಬೇಕು ಎಂದರು.
ವಿವಿಧ ಸಮುದಾಯಗಳ ಮುಖಂಡರು ಈ ಬಗ್ಗೆ ಹೆಚ್ಚು ಚಿಂತನೆ ನಡೆಸುವುದರೊಂದಿಗೆ ಯುವಜನತೆಗೆ ಉತ್ತಮವಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು ಎಂದರು.
ಸಭೆಯಲ್ಲಿ ಎರಡೂ ಕಡೆಯ ಮುಖಂಡರು ಮಾತನಾಡಿ, ನಾವು ಇಲ್ಲೆ ಹುಟ್ಟಿಬೆಳೆದಿದ್ದೇವೆ, ಯಾವುದೇ ಹಬ್ಬ ಹರಿದಿನಗಳಾಗಲಿ ಎಲ್ಲಾ ಸಮುದಾಯಗಳವರನ್ನು ಆಹ್ವಾನಿಸಿ ಆಚರಣೆ ಮಾಡಿಕೊಂಡು ಬರುವುದರೊಂದಿಗೆ ಅಣ್ಣ ತಮ್ಮಂದಿರ ತರಹ ಜೀವನ ನಡೆಸುತ್ತಿದ್ದೇವೆ. ಆದರೆ ಕೆಲವೇ ಕೆಲ ಕಿಡಿಗೇಡಿಗಳು ಮಾಡುವ ಇಂತಹ ಕೃತ್ಯಗಳಿಂದ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಹಾಗಾಗಿ ಇಂತಹ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಸಣ್ಣತಿಮ್ಮಪ್ಪ, ತಹಶೀಲ್ದಾರ್ ಮನೋರಮಾ, ಡಿ.ವೈ.ಎಸ್.ಪಿ. ಮಹೇಶ್ವರಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸಮೂರ್ತಿ, ಮುಖಂಡರಾದ ಅಪ್ಸರ್‍ಪಾಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಸಲಾಂ, ಸೈಯ್ಯದ್, ಕೆ.ಎಂ.ವಿನಾಯಕ, ಮತ್ತಿತರರು ಹಾಜರಿದ್ದರು.