ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸುವುದರೊಂದಿಗೆ ಮಕ್ಕಳನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರೂ ಸೇರಿದಂತೆ ಶಿಕ್ಷಕರ ಮೇಲಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಹೇಳಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಭಕ್ತರಹಳ್ಳಿಯ ಶಾಲಾವರಣದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಗಾಂಧೀ ಅಧ್ಯಯನ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗಾಂಧಿಯವರ ಅಹಿಂಸೆಯೇ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸುವಂತಾಗಿದ್ದರಿಂದ ಪ್ರತಿಯೊಬ್ಬರೂ ಅದರಲ್ಲಿಯೂ ಮುಖ್ಯವಾಗಿ ಇಂದಿನ ಮಕ್ಕಳು ಗಾಂಧೀಜಿಯವರ ತತ್ವ ಆದರ್ಶಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಅವರನ್ನು ಸಿದ್ದಗೊಳಿಸಬೇಕು. ಗಾಂಧೀ ತತ್ವಗಳೊಂದಿಗೆ ಸಮಾಜದಲ್ಲಿ ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು. ಸತ್ಯ, ಶಾಂತಿ, ಅಹಿಂಸೆ ಯನ್ನು ರೂಡಿಸಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣ ಕರ್ತರಾಗಬೇಕು ಎಂದರು.
ಸಾಮಾಜಿಕ ಸೇವಾಕರ್ತೆ ಸರೋಜ ವಿ ನಾಯ್ಡು ಮಾತನಾಡಿ, ಸಮಾಜದ ಭಾವೀ ಪ್ರಜೆಗಳಾದ ಮಕ್ಕಳು ಸರ್ವತೋಮುಖವಾಗಿ ಬೆಳೆಯಲು ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆರ್ಥಿಕವಾಗಿ ಉತ್ತಮವಾಗಿರುವವರು ಸಮಾಜದಲ್ಲಿನ ದುರ್ಬಲ ವರ್ಗದ ಜನರಿಗೆ ಸಹಾಯಹಸ್ತ ಚಾಚಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಗಾಂಧೀ ಅಧ್ಯಯನ ಕೇಂದ್ರ ಸ್ಥಾಪಿಸಿರುವ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ಶಾಲೆಯ ತ್ರೈವಾರ್ಷಿಕ ಸಂಚಿಕೆ ಹೊಂಬಾಳೆ-–೨ ಪುಸ್ತಕವನ್ನು ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಪ್ರೊ, ಜಿ.ಬಿ.ಶಿವರಾಜು ಬಿಡುಗಡೆಗೊಳಿಸಿದರು.
ಶಾಲಾ ಮಕ್ಕಳಿಂದ ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ, ಸೋಲಾರ್, ಮಣ್ಣಿನ ಸವಕಳಿ, ಹಾಗೂ ರಾಕೆಟ್ ಉಡಾವಣೆ ಸೇರಿದಂತೆ ವಿವಿಧ ಮಾದರಿಯ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ, ಶಿಕ್ಷಣ ತಜ್ಞೆ ಎಸ್.ಕೆ.ಪ್ರಭಾ, ನಿವೃತ್ತ ಪ್ರಾಂಶುಪಾಲರಾದ ಡಾ.ರವಿಕಲಾ ಕಾಳಪ್ಪ, ಬಿ.ಎಂ.ವಿ.ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್.ಕಾಳಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ಕೋಟೆಚನ್ನೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಆರ್.ವೆಂಕಟೇಶ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -