Home News ಕುಂದಲಗುರ್ಕಿ ಗ್ರಾಮದಲ್ಲಿ ಪಿಂಚಣಿ ಅದಾಲತ್

ಕುಂದಲಗುರ್ಕಿ ಗ್ರಾಮದಲ್ಲಿ ಪಿಂಚಣಿ ಅದಾಲತ್

0

ಸರ್ಕಾರದಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ವಿಫಲವಾಗಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸಲು ಪಿಂಚಣಿ ಅದಾಲತ್ ಸಹಕಾರಿಯಾಗಿದೆ ಎಂದು ಶಿರಸ್ತೇದಾರ್ ಲಕ್ಷ್ಮಿಕಾಂತಮ್ಮ ಹೇಳಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಅಂಗವಿಕಲರಿಗೆ ಮಾಸಿಕ ವೇತನ ಸೇರಿದಂತೆ ವಿಧವಾ ವೇತನ, ವೃದ್ದಾಪ್ಯ ವೇತನ ಹಾಗು ಮನಸ್ವಿನಿ ಯೋಜನೆಯ ಸವಲತ್ತು ಪಡೆಯಲು ನಾಗರಿಕರು ಪ್ರತಿನಿತ್ಯ ಕಚೇರಿಗೆ ಅಲೆಯುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಅದಾಲತ್ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಿಂಚಣಿಗೆ ಸಂಬಂದಿಸಿದಂತೆ ೩೧ ಅರ್ಜಿಗಳನ್ನು ಜನರಿಂದ ಸ್ವೀಕರಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಪೈಕಿ ೨೬ ಅರ್ಜಿಗಳು ಮಂಜೂರಾತಿಗೆ ಸಿದ್ದವಾಗಿದ್ದು ಮುಂದಿನ ಹತ್ತು ದಿನಗಳೊಳಗೆ ಇವರಿಗೆ ಆದೇಶಪ್ರತಿ ನೀಡಲಾಗುವುದು. ಉಳಿದಂತೆ ಐದು ಅರ್ಜಿಗಳ ಫಲಾನುಭವಿಗಳು ಪಿಂಚಣಿಗೆ ಅರ್ಹರಲ್ಲದ ಕಾರಣ ವಜಾ ಗೊಳಿಸಲಾಗಿದೆ ಎಂದು ತಿಳಿಸಿದರು.
ರಾಜಸ್ವ ನಿರೀಕ್ಷಕ ಸುಬ್ರಮಣಿ, ಗ್ರಾಮಲೆಕ್ಕಾಧಿಕಾರಿ ನಾಗರಾಜು, ಸಿಬ್ಬಂದಿ ಕೋಮಲ, ರಮೇಶ್, ಮಂಜುಳ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.