ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕಗಳನ್ನು ಮಾಡಿ ಗ್ರಾಮೀಣ ಭಾಗಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡದ ಪ್ರೀತಿಯನ್ನು ಮನೆಮನಗಳಿಗೆಲ್ಲ ತಲುಪಿಸುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಕೈವಾರ ಎನ್. ಶ್ರೀನಿವಾಸ್ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಉದ್ದಗಲಕ್ಕೂ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ನಾಡು ನುಡಿಯ ಸಂರಕ್ಷಣೆ ಮತ್ತು ಏಳ್ಗೆಯ ಧ್ಯೇಯವನ್ನಿಟ್ಟುಕೊಂಡು ಮುನ್ನಗ್ಗಲು ಎಲ್ಲರೂ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಗುರಿ ಹೊಂದಿದ್ದೇನೆ. ಕಸಾಪ ಚುಬನಾವಣೆಯ ಮುಂಚೆ ನಾನು ಮತದಾರರ ಮುಂದೆ ಹೇಳಿದ್ದ ಇಪ್ಪತ್ತು ಅಂಶಗಳ ಕಾರ್ಯಕ್ರಮವನ್ನು ನಡೆಸುವ ಮೂಲಕ ಮಾತು ಉಳಿಸಿಕೊಳ್ಳುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿ, ಕನ್ನಡ ಭಾಷೆ ಹಾಗು ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡು ಕಸಾಪ ಸದಸ್ಯತ್ವ ಪಡೆಯಬೇಕೆ ಹೊರತು ಪರಿಷತ್ನಲ್ಲಿ ಜಾತಿಯ ವಿಷಬೀಜ ಬಿತ್ತಿ ಇದರಲ್ಲಿ ಉನ್ನತ ಹುದ್ದೆ ಪಡೆಯಲಿಕ್ಕೋ ಅಥವ ಚುನಾವಣೆಯಲ್ಲಿ ತಮ್ಮದೇ ಕೋಮಿನ ಅಭ್ಯರ್ಥಿಯನ್ನು ಗೆಲ್ಲಿಸುವ ಉದ್ದೇಶದಿಂದಲೋ ಸದಸ್ಯತ್ವ ಮಾಡಿಸಬಾರದು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಚಿಂತಾಮಣಿ ತಾಲ್ಲೂಕು ಕಸಾಪ ಅಧ್ಯಕ್ಷ ದೇವತಾ ದೇವರಾಜ್, ಗುಡಿಬಂಡೆ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಜೆ.ವಿ.ವೆಂಕಟಸ್ವಾಮಿ, ಜಗದೀಶ್ಬಾಬು ಮತ್ತಿತರರು ಹಾಜರಿದ್ದರು.
ಜಿಲ್ಲಾಧ್ಯಕ್ಷರ ಅಸಮಾಧಾನ: ಅಭಿನಂದನೆ ಸಭೆಯಲ್ಲಿ ತಾಲ್ಲೂಕು ಕಸಾಪ ಪದಾಧಿಕಾರಿಗಳಿಂದ ಗೌರವ ಸಮರ್ಪಣೆ ಸಲ್ಲಿಸಿದ ನಂತರ ವೇದಿಕೆಗೆ ಆಗಮಿಸಿದ ಕೆಲವರು ತಾವು ಈಚೆಗೆ ನಡೆದ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಪರಾಭವಗೊಂಡ ಸಿ.ಬಿ.ಹನುಮಂತಪ್ಪ ಪರ ಕೆಲಸ ಮಾಡಿದ್ದು ಅವರ ಅಭಿಮಾನಿ ಬಳಗದವರಾಗಿದ್ದೇವೆ. ಹಾಗಾಗಿ ಮುಂದಿನ ಅವಧಿಗೆ ತಾಲ್ಲೂಕು ಅಧ್ಯಕ್ಷರಾಗಿ ಸಿ.ಬಿ.ಹನುಮಂತಪ್ಪ ಬಣದವರನ್ನೇ ಆಯ್ಕೆ ಮಾಡಬೇಕೆಂಬ ಮನವಿಯನ್ನು ಜಿಲ್ಲಾಧ್ಯಕ್ಷರಿಗೆ ಸಲ್ಲಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಅವರಿಗೆ ಉತ್ತರಿಸುತ್ತಾ, ಚುನಾವಣೆಯಲ್ಲಿ ತಮಗಿಷ್ಟವಾದವರ ಪರ ದುಡಿಯಲು ಎಲ್ಲರೂ ಸ್ವತಂತ್ರರು. ಆದರೆ ಇದೀಗ ಚುನಾವಣೆ ಮುಗಿದಿದ್ದು ಎಲ್ಲರೂ ಕನ್ನಡ ಬಣ ಎಂಬ ಮನೋಭಾವದೊಂದಿಗೆ ಪರಿಷತ್ ಏಳಿಗೆಗಾಗಿ ಶ್ರಮಿಸಬೇಕು. ಕನ್ನಡ ಸಾಹಿತ್ಯ ಪರಿಷತ್ ಯಾವುದೇ ಒಂದು ಕೋಮಿಗೆ, ಒಂದು ಗುಂಪಿಗೆ ಮೀಸಲಾಗಿಲ್ಲ ಬದಲಿಗೆ ಅದು ಆರು ಕೋಟಿ ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯಾಗಿದೆ. ಹಾಗಾಗಿ ಪರಿಷತ್ನಲ್ಲಿ ಯಾವುದೇ ಗುಂಪು, ಬಣ ಗಳನ್ನು ವಿಂಗಡಿಸದೇ ಕನ್ನಡದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಅಭಿನಂದನಾ ಸಭೆಯಲ್ಲಿ ಕಿಡಿಗೇಡಿ ಗುಂಪಿನಿಂದ ಅಡಚಣೆ: ಕಸಾಪ ಜಿಲ್ಲಾಧ್ಯಕ್ಷರು ಬೈಲಾ ಪ್ರಕಾರ ತಾಲ್ಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶುರುಮಾಡಿ, ತಾಲ್ಲೂಕು ಅಧ್ಯಕ್ಷರಾಗಬಯಸುವ ಆಕಾಂಕ್ಷಿಗಳು ವೇದಿಕೆಗೆ ಬಂದು ಈವರೆಗೂ ಪರಿಷತ್ನಲ್ಲಿ ತಾವು ದುಡಿದಿರುವ ಬಗ್ಗೆ ಹಾಗೂ ಮುಂದಿನ ತಮ್ಮ ಗುರಿಯ ಬಗ್ಗೆ ಸ್ಪಷ್ಟವಾಗಿ ತಿಳಿಸುವಂತೆ ಸೂಚಿಸಿದರು. ಅದರಂತೆ ತಾಲ್ಲೂಕು ಅಧ್ಯಕ್ಷ ಆಕಾಂಕ್ಷಿಗಳಾಗಿ ಬಿ.ಆರ್.ಅನಂತಕೃಷ್ಣ, ಕೆ.ಮಂಜುನಾಥ್, ಚಿಕ್ಕವೆಂಕಟರಾಯಪ್ಪ, ಸುಂದರಾಚಾರಿ ಮತ್ತಿತರರು ತಮ್ಮ ಸೇವೆ ಮತ್ತು ಮುಂದಿನ ಗುರಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಈ ತಾಲ್ಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಒಂದು ಗುಂಪು ವಿರೋಧ ವ್ಯಕ್ತಪಡಿಸಿ ಸಭೆಯಲ್ಲಿ ಜಿಲ್ಲಾಧ್ಯಕ್ಷರಿಗೆ ಸವಾಲು ಹಾಕಿ, ಬೆರಳು ತೋರಿಸಿ ಏಕವಚನದಲ್ಲಿ ಸಂಭೋದಿಸಿ ಅಡಚಣೆಗೆ ಮುಂದಾದರು. ಸಭೆಯಲ್ಲಿ ವಿನಾಕಾರಣ ಕಿರಿ ಕಿರಿ ಮಾಡಿದ ಕಿಡಿಗೇಡಿ ಗುಂಪಿನ ವಿರುದ್ಧ ಕಸಾಪ ಪದಾಧಿಕಾರಿಗಳು ಸೇರಿದಂತೆ ಮೇಲೂರಿನ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ತಿರುಗಿಬಿದ್ದು ಮಾತಿನ ಚಕಮಕಿ ನಡೆಸಿದಾಗ ಕಿಡಿಗೇಡಿ ಗುಂಪಿನವರು ಒಬ್ಬೊಬ್ಬರೇ ಸಭೆಯಿಂದ ಕಾಲ್ಕಿತ್ತರು.
ಅಂತಿಮವಾಗಿ ತಾಲ್ಲೂಕು ಅಧ್ಯಕ್ಷ ಆಕಾಂಕ್ಷಿಗಳ ಪಟ್ಟಿ ಸಂಗ್ರಹಿಸಿದ ಜಿಲ್ಲಾಧ್ಯಕ್ಷರು ಕಸಾಪ ಹಿರಿಯ ಪದಾಧಿಕಾರಿಗಳ ಸಮಿತಿಯೊಂದಿಗೆ ಚರ್ಚಿಸಿ ಆದಷ್ಟು ಬೇಗ ಪತ್ರಿಕೆಗಳಲ್ಲಿ ತಾಲ್ಲೂಕು ಅಧ್ಯಕ್ಷರ ಹೆಸರು ಪ್ರಕಟಿಸಲಾಗುವುದು ಎಂದು ಹೇಳಿ ಸಭೆ ಮುಕ್ತಾಯಗೊಳಿಸಿದರು.