ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಗಳಂತಿರುವ ಕಲಾವಿದರನ್ನು ಗುರುತಿಸಿ ಗೌರವಿಸುವುದು ಕಸಾಪ ತಾಲ್ಲೂಕು ಘಟಕದ ಧ್ಯೇಯಗಳಲ್ಲೊಂದು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್‌ನಲ್ಲಿರುವ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ 158ನೇ ಅಮಾವಾಸ್ಯೆಯ ಪ್ರಯುಕ್ತ ಆಯೋಜಿಸಿದ್ದ ಬಜನೆ, ತತ್ವಪದ, ಕೀರ್ತನೆ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಘಟಕದಿಂದ ಹಿರಿಯ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಯಾವುದೇ ಆರ್ಥಿಕ ಆದಾಯದ ಫಲಾಪೇಕ್ಷೆಯಿಲ್ಲದೇ ತಾಲ್ಲೂಕಿನ ಗ್ರಾಮ ಗ್ರಾಮಗಳಲ್ಲಿ ಕಲಾವಿದರು ಕೇವಲ ಕಲಾಸಕ್ತಿಯಿಂದ ಕಲೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಕಲಾವಿದರಿಗೆ ಪ್ರೋತ್ಸಾಹ ಮತ್ತು ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಬಹುಮುಖದಯ. ಇಂದಿನ ಯುವ ತಲೆಮಾರಿಗೆ ನಮ್ಮ ಜಾನಪದರ ಕಲೆಯು ಸಿಗಬೇಕು ಅದಕ್ಕಾಗಿ ಕಸಾಪ ತಾಲ್ಲೂಕು ಘಟಕದಿಂದ ಕಲಾಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ಹೇಳಿದರು.
ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬೆಳೆಸುವ ಧ್ಯೇಯೋದ್ಧೇಶವನ್ನು ಹೊಂದಿರುವ ಕಸಾಪ ಕಲೆ, ಸಂಸ್ಕೃತಿಗೂ ಪ್ರಾಧಾನ್ಯತೆಯನ್ನು ನೀಡುತ್ತಿದೆ. ಈಗಿನ ಯುವಕರ ಆಧ್ಯತೆಗಳು ಬದಲಾಗಿವೆ. ಆದರೂ ಕಲೆಯ ಆಸಕ್ತಿಯುಳ್ಳ ಕಿರಿಯರಿಗೆ ಹಿರಿಯರಿಂದ ಕಲೆ, ಸಂಗೀತ, ಸಾಹಿತ್ಯ ಕಲಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ಬದುಕುಳಿಯುತ್ತದೆ. ತಬಲಾ, ಹಾರ್ಮೋನಿಯಂ, ಖಂಜರ, ಘಟಂ, ಪಿಟೀಲು, ಮೃದಂಗ ಮೊದಲಾದ ವಾದ್ಯಗಳನ್ನು ಕಲಿಸುವ ವಿದ್ಯಾಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಆಗಬೇಕಿದೆ ಎಂದು ನುಡಿದರು.
ಹರಿಕಥೆ ಕಲಾವಿದ ಚೌಡಸಂದ್ರ ನಾಮದೇವ್ ಹರಿದಾಸ, ತಬಲಾ ಕಲಾವಿದ ಅಪ್ಪೇಗೌಡನಹಳ್ಳಿ ಎ.ಎಂ.ವೀರಪ್ಪ, ಹಾರ್ಮೋನಿಯಂ ಕಲಾವಿದ ಅಪ್ಪೇಗೌಡನಹಳ್ಳಿ ಎ.ರೋಹಿಣಿಕುಮಾರ್, ಗಾಯಕರಾದ ಭಕ್ತರಹಳ್ಳಿ ಮುನೇಗೌಡ, ಹಾರ್ಮೋನಿಯಂ ಕಲಾವಿದ ದೇವರಮಳ್ಳೂರು ದ್ಯಾವಪ್ಪ ಅವರನ್ನು ಕಸಾಪ ತಾಲ್ಲೂಕು ಘಟಕದಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.
ಕಲಾವಿದರು ತತ್ವಪದ, ಭಕ್ತಿಗೀತೆ, ನಾಡಗೀತೆ ಮತ್ತು ಜಾನಪದ ಗೀತೆಗಳನ್ನು ನಡೆಸಿಕೊಟ್ಟರು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಕಲಾವಿದರಾದ ಮೇಲೂರು ಗೋವಿಂದಪ್ಪ, ರಾಮಚಂದ್ರ, ಮುನಿಬೈರಪ್ಪ, ಶ್ರೀನಿವಾಸಪ್ಪ, ರಾಮಚಂದ್ರಪ್ಪ, ಲಕ್ಷ್ಮೀನಾರಾಯಣ, ದ್ಯಾವಪ್ಪ, ವೆಂಕಟರಾಯಪ್ಪ, ಮುನಿಆಂಜಿನಪ್ಪ, ಭಕ್ತರಹಳ್ಳಿ ಬಿ.ಎಂ.ಮುನಿವೆಂಕಟಪ್ಪ, ಮಳಮಾಚನಹಳ್ಳಿ ಮುನಿಶಾಮಪ್ಪ, ಅರ್ಚಕ ರಮೇಶ್‌ಶರ್ಮ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -