ಸಂಘಟನೆಗಳು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವುದರೊಂದಿಗೆ ನಾಡಿನ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಬದಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರ್ನಾಟಕ ರಕ್ಷಣಾ ಸೇನೆಯ ಕಂಬದಹಳ್ಳಿ ಶಾಖೆ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘಟನೆಗಳು ಸಮಾಜಮುಖಿಯಾಗಿ ಕೆಲಸ ಮಾಡುವುದರೊಂದಿಗೆ ವೈಯಕ್ತಿಕವಾಗಿ ಯಾರಿಗೂ ನೋವು ಉಂಟಾಗುವ ಹಾಗೆ ನಡೆದುಕೊಳ್ಳದೇ ಪ್ರಾಮಾಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.
ಅನ್ಯ ಭಾಷೆಗಳ ಪ್ರಭಾವದಿಂದಾಗಿ ಕನ್ನಡ ಭಾಷೆಯು ಇತ್ತೀಚೆಗೆ ಅಲ್ಪಸಂಖ್ಯಾತ ಭಾಷೆಯಾಗುತ್ತಿದ್ದು ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲಾ ಸಂಘಟನೆಗಳು ಪ್ರಾಮಾಣಿಕವಾಗಿ ಹೋರಾಟಗಳನ್ನು ಮಾಡುವಂತಹ ಕೆಲಸವನ್ನು ಮಾಡಬೇಕು. ಯುವಜನತೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಸಂಘಟಿತರಾಗುವುದರೊಂದಿಗೆ ಪ್ರತಿಯೊಂದು ಗ್ರಾಮದಲ್ಲೂ ಈ ರೀತಿಯಾದ ಸಂಘಟನೆಗಳು ಬೆಳೆಯಬೇಕು ಎಂದರು.
ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಟಿ.ರಮೇಶ್ಗೌಡ ಮಾತನಾಡಿ ರಾಜ್ಯದ ಗಡಿಭಾಗಗಳಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಹೋರಾಟ ನಡೆಸುವುದರೊಂದಿಗೆ ನಾಡಿನ ಜನತೆಗೆ ರಕ್ಷಣೆ ನೀಡಬೇಕಾದಂತಹ ಅನಿವಾರ್ಯತೆ ಎದುರಾಗಿದ್ದು ಇತ್ತೀಚೆಗೆ ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಂಘಟನೆ ಹೋರಾಟ ಮಾಡಲಿದೆ ಎಂದರು.
ಇಡೀ ದೇಶಕ್ಕೆ ಹಣ್ಣು, ಹಾಲು, ತರಕಾರಿ ಉತ್ಪಾದಿಸಿ ನೀಡಿದಂತಹ ಈ ಭಾಗದ ರೈತರು ಕುಡಿಯುವ ನೀರಿಗೂ ಪರಿತಪಿಸುತ್ತಿದ್ದು ಸರ್ಕಾರ ಕೂಡಲೇ ಈ ಭಾಗದ ರೈತರಿಗೆ ೧೦೦ ಟಿಎಂಸಿ ಯಷ್ಟು ನೀರು ತರಬೇಕು. ಅದು ಶಾಶ್ವತ ನೀರಾವರಿಯಾಗಬಹುದು ಅಥವ ಎತ್ತಿನಹೊಳೆ ಯೋಜನೆಯಾಗಬಹುದು ಒಟ್ಟಾರೆ ಈ ಭಾಗದ ರೈತರು ವ್ಯವಸಾಯ ಮಾಡಲು ೧೦೦ ಟಿಎಂಸಿ ಯಷ್ಟು ನೀರು ಬೇಕು. ಹಾಗಾಗಿ ಕರ್ನಾಟಕ ರಕ್ಷಣಾ ಸೇನೆಯಿಂದ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿದ ನಂತರ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು.
ಮೇಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಮಂಜುನಾಥ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ತನುಜಾ, ರಾಜ್ಯ ಸಂಚಾಲಕ ಎಸ್.ಪಿ.ರಾಜು, ತಾಲ್ಲೂಕು ಅಧ್ಯಕ್ಷ ವಿ.ವಿಶ್ವನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.