ಗಡಿನಾಡ ಪ್ರದೇಶದ ಜನರು ಹಾಗು ಯುವಕರಲ್ಲಿ ಭಾಷೆ ಹಾಗು ಸಾಹಿತ್ಯದ ಅಭಿರುಚಿಯನ್ನು ಬೆಳಸುವ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಬೇಕು ಎಂದು ಎನ್.ಆರ್. ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ನಡಿಪಿನಾಯಕನಹಳ್ಳಿ ಗ್ರಾಮದ ಕಪಿಲಮ್ಮ ಕಾಲೇಜು ಆವರಣದಲ್ಲಿ ಶುಕ್ರವಾರ ತಾಲೂಕು ಕಸಾಪ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 102 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನೆರೆಯ ಆಂದ್ರಪ್ರದೇಶದ ಗಡಿಭಾಗದಲ್ಲಿರುವ ಈ ಪ್ರದೇಶದಲ್ಲಿ ತೆಲುಗು ಭಾಷೆಯ ಪ್ರಾಬಲ್ಯ ಹೆಚ್ಚಾಗಿದ್ದು ಕನ್ನಡ ಭಾಷೆಯ ಹಾಗು ಸಾಹಿತ್ಯದ ಬಗ್ಗೆ ಜನರಲ್ಲಿ ಅಭಿರುಚಿ ಮೂಡುವಂತೆ ಮಾಡಲು ಗಡಿಬಾಗದ ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳು ಆಯೋಜಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಯಾವುದೇ ಒಂದು ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಸಮುದಾಯಗಳ ಸಮ್ಮಿಲನದಲ್ಲಿ ಸಾಹಿತ್ಯಾಸಕ್ತರನ್ನು ಪ್ರೇರೇಪಿಸುವುದರೊಂದಿಗೆ ನಾಡಿನ ಭಾಷೆ ಸೇರಿದಂತೆ ಈ ಭಾಗದ ನೆಲ, ಜಲ ಸಮಸ್ಯೆಗಳ ಧ್ವನಿಯಾಗಬೇಕು ಎಂದರು.
ನಾಡಿನಲ್ಲಿ ವಿವಿಧ ಸಂಘಟನೆಗಳಿದ್ದರೂ ಕೂಡಾ ವಿಶಿಷ್ಟವಾದ ರೀತಿಯಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಮುಂದುವರೆಸಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತಷ್ಟು ಉತ್ತಮ ಕಾರ್ಯ ನಿರ್ವಹಿಸಲು ಸಜ್ಜಾಗಬೇಕು ಎಂದರು.
ಕಸಾಪ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಅಮೃತ್‍ಕುಮಾರ್ ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಕ್ಕಷ್ಟೆ ಸೀಮಿತವಾಗದೆ, ರಾಜ್ಯದಲ್ಲಿನ ಮತ್ತಷ್ಟು ಸಮಸ್ಯೆಗಳ ನಿವಾರಣೆಗೆ ಶ್ರಮಿಸುವ ಶಕ್ತಿಯಾಗಿ ಕಸಾಪ ಬೆಳೆಯಬೇಕು ಎಂದರು.
ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಶಾಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕಸಾಪ ಹಮ್ಮಿಕೊಳ್ಳಬೇಕು ಎಂದರು.
ಭಾಷೆ, ಸಾಹಿತ್ಯ ಉಳಿಯಬೇಕಾದರೆ ಪ್ರತಿಯೊಬ್ಬರೂ ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ದೂರದೃಷ್ಠಿಯಿಂದ ಶುರುವಾದ ಕಸಾಪ ಇಂದು ಬೃಹತ್ ಮಟ್ಟದಲ್ಲಿ ಬೆಳೆದಿದ್ದು ತಾಲೂಕು ಕಸಾಪ ವತಿಯಿಂದ ತಾಲೂಕಿನ ಪ್ರತಿಯೊಂದು ಶಾಲೆಯಲ್ಲಿಯೂ ಶಾಲಾ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಈ ಭಾಗದ ಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಪ್ರಾಮಾಣಿಕವಾಗಿ ದುಡಿದ ತೃಪ್ತಿ ಇದೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ದಾರಿ ಎಂಬ ವಿಚಾರವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಜೆ.ವಿ.ಚಿತ್ರ, (ಪ್ರಥಮ), ಜೆ.ಎನ್.ರಘುಪ್ರಸಾದ್ (ದ್ವಿತೀಯ), ಮೌನಿಕ.ಎ (ತೃತೀಯ) ರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಸಾಪ ಮಾಜಿ ಅಧ್ಯಕ್ಷ ವಿ.ಕೃಷ್ಣ, ಕಸಬಾ ಹೋಬಳಿ ಪಂಚಾಯಿತಿ ಪ್ರತಿನಿಧಿ ಕೆಂಪೇಗೌಡ, ಜಂಗಮಕೋಟೆ ಮುನಿರಾಜು(ಕುಟ್ಟಿ), ಸಮಾಜ ಸೇವಕ ಅರಕೆರೆ ಮುನಿರಾಜು, ಸ್ನೇಕ್ ನಾಗರಾಜ್, ಕಾಲೇಜಿನ ಪ್ರಾಂಶುಪಾಲ ಎನ್.ಕೆ. ಸುದರ್ಶನ್, ಉಪನ್ಯಾಸಕರಾದ ಮುನಿರಾಜು, ಸಿ.ಕೆ. ರಾಜೇಶ್. ಪ್ರಜ್ವಲ್, ಜಯಶ್ರಿ, ಹರೀಶ್‍ಕುಮಾರ್, ಪದ್ಮ, ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -