Home News ಕನ್ನಡ ನಾಡು, ನುಡಿಯ ರಕ್ಷಣೆ ಯುವಕರ ಧ್ಯೇಯವಾಗಲಿ

ಕನ್ನಡ ನಾಡು, ನುಡಿಯ ರಕ್ಷಣೆ ಯುವಕರ ಧ್ಯೇಯವಾಗಲಿ

0

ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯವೆಂದು ಹಿರಿಯ ಕನ್ನಡಪರ ಹೋರಾಟಗಾರ ಖ.ರಾ.ಖಂಡೇರಾವ್ ತಿಳಿಸಿದರು.
ನಗರದ ಉಲ್ಲೂರು ಪೇಟೆಯಲ್ಲಿ ಸೋಮವಾರ ಸ್ನೇಹ ಯುವಕ ಸಂಘದಿಂದ ಆಯೋಜನೆ ಮಾಡಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಗಡಿ, ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ, ಅದರಲ್ಲೂ ವಿಶೇಷವಾಗಿ ಯುವಜನತೆ ನಾಡಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯುವಜನತೆ ಹೆಚ್ಚು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದರಿಂದ ಕನ್ನಡ ಭಾಷೆಯ ಹಿರಿಮೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದರೂ ಕೂಡಾ ಇಂದಿಗೂ ಭಾಷೆಯ ಉಳಿವಿಗಾಗಿ ಹೋರಾಟ ನಡೆಸಬೇಕಾದಂತಹ ದುಸ್ಥಿತಿ ಒದಗಿ ಬಂದಿರುವುದು ಶೋಚನೀಯವಾದ ಸಂಗತಿಯಾಗಿದೆ ಎಂದರು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಉಳಿದಿದೆಯೆಂದರೆ ಅದು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಇಂದು ಬದಲಾಗುತ್ತಿರುವ ಜನರ ಜೀವನ ಶೈಲಿಯಿಂದಾಗಿ ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಹುಡುಕಾಡಬೇಕಾದಂತಹ ದುಸ್ಥಿತಿ ಒದಗಿ ಬಂದಿದೆ, ಎಲ್ಲಾ ರಾಜ್ಯಗಳ ಜನತೆಗೆ ಆಸರೆಯನ್ನು ನೀಡುತ್ತಾ ಸಹೃದಯತೆಯಿಂದ ಎಲ್ಲರನ್ನೂ ಸ್ವಾಗತಿಸುವಂತಹ ರಾಜ್ಯದಲ್ಲಿ ಅನ್ಯ ಬಾಷಿಕರಿಂದ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುವ ಮೂಲಕ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಆದೇಶಗಳನ್ನು ಕನ್ನಡ ಭಾಷೆಯಲ್ಲಿಯೆ ಹೊರಡಿಸಬೇಕು. ನ್ಯಾಯಾಲಯಗಳಿಂದ ಬರುವಂತಹ ತೀರ್ಪುಗಳೂ ಕೂಡಾ ಕನ್ನಡ ಭಾಷೆಯಲ್ಲಿದ್ದರೆ, ಕಕ್ಷಿದಾರರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ, ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಪ್ರತಿಯೊಬ್ಬ ಕನ್ನಡಿಗರು ಹೋರಾಟ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಉಲ್ಲೂರುಪೇಟೆಯಲ್ಲಿ ಹಾಗೂ ಮಯೂರ ವೃತ್ತದಲ್ಲಿ ಆಟೋಚಾಲಕರ ಸಂಘದ ವತಿಯಿಂದ ಧ್ವಜಾರೋಹಣ ಮತ್ತು ತಾಯಿ ಭುವನೇಶ್ವರಿ ಚಿತ್ರಪಟಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.
ಭರತ್, ಮುನಿರಾಜು, ನವೀನ್. ಶ್ರೀನಿವಾಸ್, ಚಂದ್ರು, ಡಿ.ವಿ.ವೆಂಕಟೇಶ್, ಶ್ರೀರಾಮ್, ಪ್ರಕಾಶ್, ಗಂಗಾಧರ, ಸುನಿಲ್, ಕೃಷ್ಣಕುಮಾರ್ ಮತ್ತಿತರರು ಹಾಜರಿದ್ದರು.