Home News ಕನ್ನಡಿಗರು ಸಂಘಟಿತರಾಗಬೇಕು

ಕನ್ನಡಿಗರು ಸಂಘಟಿತರಾಗಬೇಕು

0

ಜಾತಿ, ಧರ್ಮ, ವರ್ಗ ಎಂಬುದನ್ನು ಬಿಟ್ಟು ಸಂಘಟಿತರಾಗದಿದ್ದಲ್ಲಿ ಕನ್ನಡಿಗರಾದ ನಮಗೆ ಕನ್ನಡ ನಾಡಿನಲ್ಲೇ ಉಳಿಗಾಲವಿಲ್ಲದಂತ ಪರಿಸ್ಥಿತಿ ಎದುರಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಮತ್ತು ಕೊತ್ತನೂರು ಗ್ರಾಮಗಳಲ್ಲಿ ಕರವೇ ನೂತನ ಗ್ರಾಮ ಶಾಖೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ನಾಡು, ನುಡಿ, ನೆಲ, ಜಲವನ್ನು ಸಂರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾದಂತಹ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.
ಬಯಲು ಸೀಮೆಯ ಈ ಭಾಗದ ಜನತೆ ಕುಡಿಯಲು, ಕೃಷಿಗಾಗಿ ನೀರು ಕೊಡುವಂತೆ ಕಳೆದ ಎರಡು ದಶಕಗಳಿಂದಲೂ ಸರ್ಕಾರವನ್ನು ಒತ್ತಾಯಿಸಿ ಹತ್ತು ಹಲವು ರೀತಿಯಲ್ಲಿ ಹೋರಾಟಗಳನ್ನು ನಡೆಸುತ್ತಿದ್ದರೂ ಈ ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲ. ಕಣ್ಣು ಕಾಣಿಸುತ್ತಿಲ್ಲ ಎಂಬಂತೆ ವರ್ತಿಸುತ್ತಿದೆ. ಇದೀಗ ಎದುರಾಗುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಹಾಗೂ ಆ ನಂತರದ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲೂ ಚುನಾವಣೆಗಳನ್ನು ಬಹಿಷ್ಕರಿಸುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಬೇಕಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ತಮಿಳುನಾಡು ಮೇಕುದಾಟಿ ಯೋಜನೆಗೆ ತೆಗೆದ ಖ್ಯಾತೆ ವಿರುದ್ದ ಇದೇ ತಿಂಗಳು ೧೮ ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದು ಬಂದ್ನಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ನಾಗರಿಕರು ಭಾಗವಹಿಸಿ ಯಶಸ್ವಗೊಳಿಸಬೇಕು ಎಂದು ಕರೆ ನೀಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಚಲಪತಿ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಎನ್.ಚಂದ್ರಶೇಖರ್, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಆರ್.ಎಂ.ಶ್ರೀಧರ್, ಸೀನಪ್ಪಗೌಡ, ಕೊತ್ತನೂರು ಶ್ರೀಧರ್, ಸತೀಶ್, ರಾಜಗೋಪಾಲರೆಡ್ಡಿ, ಚಂದನ್, ರುದ್ರಾಚಾರಿ, ಶಶಿಕುಮಾರ್, ಮಹೇಶ್, ಹರೀಶ್, ಪ್ರಕಾಶ್, ಶಿವಕುಮಾರ್, ಮಂಜು, ನರಸಿಂಹಮೂರ್ತಿ, ಚನ್ನರಾಯಪ್ಪ, ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.