ತಾಲ್ಲೂಕಿನ ಹೊಸಪೇಟೆ ಗ್ರಾಮದಿಂದ ವಿಜಯಪುರದ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಚರಂಡಿಯ ತ್ಯಾಜ್ಯ ನೀರು ಹರಿಯುತ್ತಿದ್ದು ಓಡಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ರೂಪಿಸದ ಕಾರಣ, ಈಗಾಗಲೇ ಹದಗೆಟ್ಟಿದ್ದ ರಸ್ತೆಯಲ್ಲಿ ತ್ಯಾಜ್ಯದ ನೀರು ಹರಿಯುತ್ತಿದೆ. ಗ್ರಾಮದ ಪ್ರಮುಖ ದೇವಾಲಯಗಳಾದ ಚನ್ನಕೇಶ್ವರಸ್ವಾಮಿ ಹಾಗೂ ಸೋಮೇಶ್ವರಸ್ವಾಮಿ ಈ ಮಾರ್ಗದಲ್ಲಿದ್ದು, ಹೆಚ್ಚಾಗಿ ಗ್ರಾಮಸ್ಥರು ಬಳಸುವ ರಸ್ತೆಯಾಗಿದೆ. ಮಳೆ ಬಂದಲ್ಲಿ ಈ ಮಾರ್ಗದಲ್ಲಿ ನಡೆದು ಹೋಗುವುದೂ ದುಸ್ಥರವಾಗುತ್ತದೆ. ಹಲವು ದ್ವಿಚಕ್ರ ವಾಹನ ಸವಾರರು ಈ ಹದಗೆಟ್ಟ ರಸ್ತೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡ ನಿದರ್ಶನಗಳೂ ಇವೆ. ಗ್ರಾಮಸ್ಥರು ಹಲವಾರು ಬಾರಿ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಮೊದಲು ಚರಂಡಿಯನ್ನು ದುರಸ್ಥಿಗೊಳಿಸಿ ಚರಂಡಿ ನೀರು ರಸ್ತೆಯಲ್ಲಿ ಹರಿಯದಂತೆ ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ಖಾಯಿಲೆಗಳೂ ಹರಡುತ್ತಿವೆ. ತಾತ್ಕಾಲಿಕವಾದರೂ ರಸ್ತೆಯನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಮಾರ್ಗದಲ್ಲಿ ಮೇಯಿಸಲು ಜಾನುವಾರುಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಹೆಣ್ಣು ಮಕ್ಕಳು ಹಾಗೂ ಹಿರಿಯರು ಜಾನುವಾರುಗಳಿಗಾಗಿ ಮೇವಿನ ಹೊರೆ ಹೊತ್ತುಕೊಂಡು ಇದೇ ದಾರಿಯಲ್ಲಿ ಹೋಗಿ ಬರಬೇಕಾಗುತ್ತದೆ. ಪಂಚಾಯತಿ ಕೇಂದ್ರದಲ್ಲೇ ದಿನಬಳಕೆಯ ರಸ್ತೆಯನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇಟ್ಟುಕೊಂಡಿರುವುದು ಸರಿಯಲ್ಲ. ಆದಷ್ಟು ಬೇಗ ರಸ್ತೆಯ ಸ್ಥಿಯನ್ನು ಸುಧಾರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.