ಮಕ್ಕಳ ಮೇಲೆ ಮಾನಸಿಕ ಒತ್ತಡವನ್ನು ಹೇರಿ ಅವರ ಸ್ವಾತಂತ್ರ್ಯವನ್ನು ಕಸಿಯುತ್ತಿರುವುದರಿಂದ ಮಕ್ಕಳ ಕ್ರಿಯಾಶೀಲತೆ ಕುಂಠಿತಗೊಳ್ಳುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ‘ಮಕ್ಕಳ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಗು ಸಮಾಜದ ಕಣ್ಣು. ಮಗುವು ಪ್ರಾಪ್ತ ವಯಸ್ಸಿಗೆ ಬರುವ ತನಕ ಪೋಷಿಸಿ, ಕಲಿಸಿ, ಸಂರಕ್ಷಿಸಿ ಸಮಾಜಮುಖಿಯಾಗಿ ಬೆಳೆಸಬೇಕಾದದ್ದು ಪೋಷಕರ ಹಾಗೂ ಸಮಾಜದ ಜವಾಬ್ದಾರಿ. ಈಚೆಗೆ ಹೆಚ್ಚಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಯಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಲವಾರು ನಿಯಮಗಳನ್ನು ಶಿಕ್ಷಣ ಸಂಸ್ಥೆಗಳು ಪಾಲಿಸಲು ಸೂಚನೆ ನೀಡಲಾಗಿದೆ. ಇದರೊಂದಿಗೆ ಬೋದಕ ಬೋದಕೇತರ ಸಿಬ್ಬಂದಿಗಳ ಸಂಪೂರ್ಣ ಮಾಹಿತಿಯನ್ನು ಭಾವಚಿತ್ರದ ಸಮೇತ ಸಂಗ್ರಹಿಸಿಡುವುದು ಖಡ್ಡಾಯ ಮಾಡಿದೆ. ಶಾಲೆಗೆ ಬರುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ಕಾಣಬೇಕು. ಮಕ್ಕಳ ಪೋಷಕರಿಗೆ ಗುರುತಿನ ಚೀಟಿ ನೀಡುವುದು ಹಾಗೂ ಅಪರಿಚಿತ ವ್ಯಕ್ತಿಗಳನ್ನು ಶಾಲಾ ಆವರಣದಲ್ಲಿ ಅಥವಾ ಮಕ್ಕಳೊಂದಿಗೆ ಕಂಡುಬಂದಲ್ಲಿ ವಿಚಾರಿಸಬೇಕು.ಅನುಮಾನ ಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಮಕ್ಕಳ ಸುರಕ್ಷತಾ ವಿಷಯದಲ್ಲಿ ಪೋಷಕರ ಮತ್ತು ಶಿಕ್ಷರ ಪಾತ್ರ ಅತಿ ಮುಖ್ಯವಾದದ್ದು. ಮಕ್ಕಳ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸತಕ್ಕದ್ದು. ಮಾನವತ್ವ ಗುಣವು ಎಲ್ಲರ ಮನಸ್ಸಿನಲ್ಲೂ ಮನೆ ಮಾಡಬೇಕು. ಆಗ ಮಕ್ಕಳು ದೇವರಂತೆ ಕಾಣುತ್ತಾರೆ. ಮುಗ್ಧ ಮಕ್ಕಳ ಮನಸ್ಸನ್ನು ಘಾಸಿಗೊಳಿಸುವ ಅಮಾನವೀಯತೆಯನ್ನು ಸಮಾಜದಿಂದ ತೊಲಗಿಸಲು ಎಲ್ಲರೂ ಶ್ರಮಿಸಬೇಕು ಎಂದು ನುಡಿದರು.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ಆರೋಗ್ಯ ಇಲಾಖೆಯ ಕಿರಣ್ ಕುಮಾರ್, ಶಿಕ್ಷಣ ಸಂಯೋಜಕ ರಾಮಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.