ನಮ್ಮ ರಾಜ್ಯದಲ್ಲಿ ಸಂಗೀತದ ಏಳಿಗೆಗೆ ಹೆಚ್ಚು ಪ್ರೋತ್ಸಾಹದಾಯಕವಾಗಿದ್ದದ್ದು ಭಜನೆ ಮನೆಗಳು. ಅನೇಕ ವಿದ್ವಾಂಸರುಗಳು ಇಂತಹ ಭಜನೆ ಮನೆಗಳಲ್ಲಿ ಹಾಡಿಯೇ ಆನಂತರ ಪ್ರಸಿದ್ಧಿಗೆ ಬಂದವರು. ಬಹುತೇಕ ಊರುಗಳಲ್ಲಿ ಒಂದೊಂದು ಭಜನೆ ಮನೆ ಇರುತ್ತದೆ. ಭಜನೆ ಮನೆಗಳು ಸಂಗೀತಗಾರರಿಗೆ ಗಾನಸುಧೆ ಹರಿಸಲು ಕೇಂದ್ರಗಳಾಗಿದ್ದವು. ಒಂದು ರೀತಿಯಲ್ಲಿ ಶ್ರಮಿಕ ವರ್ಗದ ಧಾರ್ಮಿಕ ಕೇಂದ್ರ ಭಜನೆ ಮನೆಗಳು. ಸಾಮಾನ್ಯವಾಗಿ ಭಜನೆ ಮನೆಯಿರುವ ರಸ್ತೆಯನ್ನು ಭಜನೆ ಮನೆ ರಸ್ತೆ ಎನ್ನುವ ರೂಢಿಯಿದೆ.
ಭಜನೆ ಮನೆಗೂ ಶ್ರೀರಾಮನವಮಿಗೂ ಅವಿನಾಭಾವ ಸಂಬಂಧ. ಭಜನೆ ಮನೆಗಳಲ್ಲಿ ಶ್ರೀರಾಮನ ಮೂರ್ತಿ ಮತ್ತು ಪಟಗಳಿರುತ್ತವೆ. ಇಲ್ಲಿ ಅಖಂಡ ರಾಮ ಭಜನೆ, ರಾಮಾಯಣ ಪಾರಾಯಣ ನಡೆಯುತ್ತವೆ. ಶಿಡ್ಲಘಟ್ಟದ ಉಲ್ಲೂರುಪೇಟೆಯಲ್ಲಿ ಭಜನೆ ಮನೆಯಿದ್ದು, ಅದು ಒಂದು ಶತಮಾನದ ಇತಿಹಾಸವನ್ನು ಹೊಂದಿದೆ. ವಿಶೇಷವೆಂದರೆ ಈ ಭಜನೆ ಮನೆಯಲ್ಲಿ ಬೆಲೆಯೇ ಕಟ್ಟಲಾಗದ ಅಪರೂಪದ ಚಿನ್ನದ ರೇಖುಗಳಿರುವ ದೇವರ ಚಿತ್ರಪಟಗಳಿವೆ.
ಒಂದು ಶತಮಾನದ ಇತಿಹಾಸವನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಶಿಡ್ಲಘಟ್ಟದ ಭಜನೆ ಮನೆಯ ಇತಿಹಾಸವನ್ನು ಕೆದಕಿದಾಗ ಇದನ್ನು ಪ್ರಾರಂಭಿಸಿದವರ ಮನಸ್ಸುಗಳು, ಧಾರ್ಮಿಕ ಆಸಕ್ತಿ, ಸಂಗೀತದ ಪ್ರೇಮ, ರಾಮಾಯಣ ಭಾಗವತವನ್ನು ಜನರಿಗೆ ಮುಟ್ಟಿಸುವ ತವಕ, ಸಾಂಸ್ಕೃತಿಕ ಸಂಸ್ಕಾರ ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ನೂರು ವರ್ಷಗಳ ಇತಿಹಾಸ, ಶ್ರೀರಾಮ ದೇವರೊಂದಿಗಿನ ಎರಡು ಮೂರು ತಲೆಮಾರುಗಳ ನಂಟು, ಒಂದು ಶತಮಾನಗಳ ಕಾಲ ಆಚರಿಸಿಕೊಂಡು ಬಂದ ಶ್ರೀರಾಮ ಪಾರಾಯಣ, ಶ್ರೀರಾಮನ ನವಮಿ, ಅಖಂಡ ರಾಮ ಭಜನೆ, ಸಂಗೀತೋತ್ಸವಗಳ ಮೆಲುಕು ಹಾಕುವುದರಿಂದ ಹಿಂದಿನವರ ಆದರ್ಶ, ಧಾರ್ಮಿಕ ಪ್ರಜ್ಞೆ ದರ್ಶನವಾಗುತ್ತದೆ.
‘ಮಾರಮ್ಮ ಗುಡಿಯ ಪಕ್ಕದಲ್ಲಿದ್ದ ಖಾಲಿ ಸ್ಥಳವನ್ನು ಬೆಸ್ತರ ಶೀನಪ್ಪ 36 ರೂಪಾಯಿಗೆ ಕೊಂಡು ಅಲ್ಲಿ ಭಜನೆ ಮನೆಯನ್ನು ಕಟ್ಟಬೇಕೆಂದು ಮಾಚಿರೆಡ್ಡಪ್ಪ, ಮಲೆಪ್ಪನವರ ವೆಂಟರಾಯಪ್ಪ, ಚಿಕ್ಕವೆಂಕಟಪ್ಪ, ದೊಡ್ಡ ಬ್ಯಾಟಪ್ಪ, ದೊಳೆಬಜ್ಜನ್ನ, ಅರವ ಪಾಪಣ್ಣ ಅವರ ಜತೆಗೂಡಿ ತಾವೂ ಚಂದಾ ಹಾಕಿ 34 ರೂಪಾಯಿಗೆ ಭಜನೆ ಮನೆ ಕಟ್ಟಲು ಬಿಟ್ಟುಕೊಟ್ಟರು. ಈ ಕೆಲಸ ಪ್ರಾರಂಭಿಸಿದ್ದು 1917ರ ಜೂನ್1ರಂದು. ವಿವಿಧ ಭಕ್ತರಿಂದ ಸುಮಾರು 537 ರೂಪಾಯಿಯಷ್ಟು ಹಣವನ್ನು ಸಂಗ್ರಹಿಸಿ, ಭಜನೆ ಮನೆಗೋಸ್ಕರ ಸಾಗುವಳಿ ಜಮೀನನ್ನು ಕೊಂಡು, ಭಜನೆ ಮನೆಯ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರು.
ಶೀನಪ್ಪನವರಿಗೆ ಅಪರೂಪದ ಹಾಗೂ ಅತ್ಯುತ್ತಮ ದೇವರ ಪಟಗಳನ್ನು ತರಬೇಕೆಂಬ ಆಸೆಯಿತ್ತು. ಅದಕ್ಕಾಗಿ ಮದ್ರಾಸಿನಲ್ಲಿ ‘ಶ್ರೀ ರಾಮಾಂಜನೇಯ ಕೂಟ’ದಲ್ಲಿದ್ದ ಪಟಗಳನ್ನು ನೋಡಿ ಅದಕ್ಕಿಂತಲೂ ದೊಡ್ಡದಾದ ಪಟಗಳನ್ನು ಮಾಡಿಸಲು ಮದ್ರಾಸಿನಲ್ಲಿ ಒಪ್ಪಂದ ಕೊಟ್ಟರು. 5 ಅಡಿ ಉದ್ದ ನಾಲ್ಕೂವರೆ ಅಡಿ ಅಗಲವಿರುವ ಬಂಗಾರದ ರೇಖಿನಲ್ಲಿ ಬಿಡಿಸಿರುವಂಥಹ ಮೂರು ಪಠಗಳನ್ನು ಮಾಡಿಸಿದರು. ಸಮಸ್ತ ಋಷಿ ದೇವತೆಗಳಿರುವ ಶ್ರೀರಾಮ ಪಟ್ಟಾಭಿಷೇಕದ ಪಟ(211 ರೂ 3 ಆಣೆ 6 ಕಾಸು)ಕ್ಕೆ ಮಾಚಿರೆಡ್ಡಪ್ಪ ಹಣ ನೀಡಿದರೆ, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮೆಯರ ಪಟ(176 ರೂ 3 ಆಣೆ 6 ಕಾಸು)ಕ್ಕೆ ಸಾರ್ವಜನಿಕರಿಂದ ಸಂಗ್ರಹಿತ ಹಣವನ್ನು, ಶ್ರೀವೆಂಕಟೇಶ್ವರಸ್ವಾಮಿ ಶ್ರೀದೇವಿ ಭೂದೇವಿಯರ ಪಟಕ್ಕೆ ವೆಂಕಟರಾಯಪ್ಪ ಹಣ ನೀಡಿದರು. ಗೋಡೆಯಲ್ಲಿನ ಕನ್ನಡಿ ಬಿಂಬ ಸೇರಿದಂತೆ ಮದ್ರಾಸಿನಿಂದ ತರಲು 528 ರೂ 10 ಆಣೆ 6 ಕಾಸು ಆಗಿತ್ತು. ರೈಲಿನಲ್ಲಿ ಬಂದಿಳಿದಾಗ ಇಡೀ ಉಲ್ಲೂರುಪೇಟೆಯ ಜನರೆಲ್ಲ ಸಡಗರದಿಂದ ಸ್ವಾಗತಿಸಿದ್ದರು. ಇವುಗಳ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮವನ್ನು 1928 ರ ಡಿಸೆಂಬರ್ 2 ರಿಂದ 15 ರವರೆಗೂ ಶಾಸ್ತ್ರೋಕ್ತವಾಗಿ ನಡೆಸಲಾಯಿತು. ನಂತರದ ಕಾಲದಲ್ಲಿ ಅಂದರೆ 1968 ರ ಸುಮಾರಿಗೆ ಭಕ್ತರ ಸಹಕಾರದಿಂದ ಲಕ್ಷ್ಮೀ ಮತ್ತು ಸರಸ್ವತಿಯ ಪಟಗಳೂ ಸೇರಿಕೊಂಡವು.
ಪ್ರತಿದಿನ ರಾಮಾಯಣ ಹರಿಕಥೆ ಏರ್ಪಾಟಾಯಿತು. ವಸಂತೋತ್ಸವವನ್ನು ಆಚರಿಸಲಾಯಿತು. ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ, ಗೋಕುಲಾಷ್ಟಮಿ, ಭಜನೆ ಪೂಜೆಗಳು ನಿರಂತರವಾಗಿ ನಡೆಯುತ್ತಾ ಸಾಗಿತು.
1966ರಲ್ಲಿ ಶೀನಪ್ಪ ತಮ್ಮ ಪತ್ನಿ ನಿಧನರಾದ ಮೇಲೆ ತಮ್ಮ ಒಂದು ಅಂಗಡಿಯನ್ನು ಭಜನೆ ಮನೆಗೆ ದಾನ ಬರೆದರು. ಭಜನೆ ಮನೆಯ ಹಿಂದಿನ ಖಾಲಿ ಜಾಗವನ್ನು ಒಳಪಡಿಸಿ ರಾಮ ಸೀತೆ ಲಕ್ಷ್ಮಣ ಮತ್ತು ಹನುಮಂತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದೇವಸ್ಥಾನವಾಗಿಸಬೇಕು ಎಂದು ಭಕ್ತರ ಸಮ್ಮುಖದಲ್ಲಿ ತಿಳಿಸಿ ವಿಗ್ರಹಗಳನ್ನು ಮಾಡಿಸಲು ಒಪ್ಪಂದ ಕೊಟ್ಟರು. ಆದರೆ ಅವರು ನಿಧನರಾದ ಕಾರಣ ಅವರ ಮಗ ವೆಂಕಟರಮಣಯ್ಯ 1969 ರ ಫೆಬ್ರುವರಿ 2 ರಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿಸಿದರು. ಈ ಕಾರಣದಿಂದ ಉಲ್ಲೂರುಪೇಟೆಯಲ್ಲಿ ಮಾರಮ್ಮನಗುಡಿ, ಬಸವಣ್ಣನ ಗುಡಿಯೊಂದಿಗೆ ಭಜನೆ ಮನೆಯು ಶ್ರೀರಾಮ ಮಂದಿರವಾಗಿ ನೆಲೆಸುವಂತಾಯಿತು’ ಎಂದು ಈ ಬಗ್ಗೆ ಬಿ.ಸೀನಪ್ಪ ಅವರ ಮಗ ಎಸ್.ವೆಂಕಟರಮಣಯ್ಯ ದಾಖಲಿಸಿರುವ ಮಾಹಿತಿಯಿಂದ ತಿಳಿಯುತ್ತದೆ.
‘1970 ರ ಸುಮಾರಿಗೆ ಈಗಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಮತ್ತು ದಿವಂಗತ ಮೇಸ್ಟ್ರು ಕೃಷ್ಣಪ್ಪ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡ ವಿನಾಯಕ ಯುವಕರ ಸಂಘ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಗೇ ಹೆಸರಾಯಿತು. ಸುಮಾರು 25 ವರ್ಷಗಳ ಕಾಲ ತುಮಕೂರು ಬಳಿಯ ಗೂಳೂರಿನಿಂದ ಶಿಲ್ಪಿಗಳು ಬಂದು ಸ್ಥಳೀಯ ಕೆರೆಗಳಿಂದ ಮಣ್ಣನ್ನು ಆರಿಸಿ ತಂದು ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದುದು ಈಗ ಇತಿಹಾಸ. ಗಣೇಶನ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳ ಕಾಲ ವಿವಿಧ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. 40 ವರ್ಷಗಳ ಹಿಂದೆ ವಿನಾಯಕ ಯುವಕರ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಡಾ.ವೀರೇಂದ್ರ ಹೆಗಡೆಯವನ್ನು ಕರೆಸಲಾಗಿತ್ತು’ ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
‘ಕಳೆದ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಮಾರಮ್ಮನಗುಡಿ ಮತ್ತು ಶ್ರೀರಾಮ ಮಂದಿರದ ಮುಂದೆ ರಸ್ತೆಯಲ್ಲಿ ಭಕ್ತರ ಸಹಕಾರದಿಂದ ಕಬ್ಬಣದ ಕಂಬಗಳು ಮತ್ತು ಶೀಟುಗಳಿಂದ ಬಿಸಿಲು ಬೀಳದಂತೆ ನೆರಳಿಗಾಗಿ ಶಾಶ್ವತ ನಿರ್ಮಾಣ ಕಾರ್ಯ ನಡೆಯಿತು. ಪ್ರತಿ ಯುಗಾದಿಯಂದು ಪಂಚಾಂಗ ಶ್ರವಣ, ಸಂಕ್ರಾಂತಿಯಲ್ಲಿ ಎತ್ತುಗಳ ಮೆರವಣಿಗೆ, ಶ್ರೀರಾಮನವಮಿಯಂದು ಕಲ್ಯಾಣೋತ್ಸವ, ತ್ಯಾಗರಾಜರ ಆರಾಧನೆಗೆ ಸಂಗೀತೋತ್ಸವ, 15ದಿನಗಳ ಕಾಲ ಗಣೇಶೋತ್ಸವ, ಧನುರ್ಮಾಸ ಪೂಜೆ, ಮೂರು ವರ್ಷಕ್ಕೊಮ್ಮೆ ಆಷಾಡದಲ್ಲಿ ಜಾತ್ರೆ, ನಿತ್ಯಪೂಜೆ ನಡೆಯುತ್ತಿದೆ. ಕೃಷ್ಣಾಷ್ಟಮಿ ಮತ್ತು ಸಂಕ್ರಾಂತಿ ಹಬ್ಬದಂದು ನಡೆಯುವ ಎತ್ತುಗಳ ಪೂಜೆಯ ಸಂದರ್ಭದಲ್ಲಿ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮೆಯರ ಪಟವನ್ನು ಕೆಳಗೆ ಇಳಿಸಿ ಪೂಜಿಸಲಾಗುತ್ತದೆ’ ಎಂದು ಒಂಭತ್ತು ವರ್ಷಗಳಿಂದ ಅರ್ಚಕರಾಗಿರುವ ಸತ್ಯಪ್ರಕಾಶ್ ತಿಳಿಸಿದರು.