Home News ಉರ್ದು ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

ಉರ್ದು ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

0

ನಗರದ ತೈಬಾನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನ ಬಳಸಿಕೊಂಡು ಮನೆ ನಿರ್ಮಾಣ ಸೇರಿದಂತೆ ದೇಹದ ಕಾರ್ಯನಿರ್ವಹಣೆ, ಎಚ್೧ ಎನ್೧ ಖಾಯಿಲೆಯ ಬಗ್ಗೆ ಅರಿವು, ವಿದ್ಯುತ್ ಉತ್ಪಾದನಾ ಮಾದರಿ, ರಾಕೆಟ್, ಅರಣ್ಯ, ಪರಿಸರ ಮತ್ತು ಪ್ರಮುಖವಾಗಿ ಈ ಭಾಗದ ಜನರ ಜೀವನಾಡಿಯಾಗಿರುವ ರೇಷ್ಮೆ ಉತ್ಪಾದನೆ, ನೂಲು ಬಿಚ್ಚಾಣಿಕೆ ಘಟಕಗಳ ಮಾದರಿಗಳನ್ನು ತಯಾರಿಸಿದ್ದು, ವಿವರಣೆ ನೀಡಿ ನೋಡುಗರ ಗಮನ ಸೆಳೆದರು.
ಶಾಲಾ ಮುಖ್ಯಶಿಕ್ಷಕಿ ರಜಿಯಾಖಾನಂ ಮಾತನಾಡಿ, ತಾಂತ್ರಿಕವಾಗಿ ಬೆಳೆಯುತ್ತಿರುವ ಯುಗವನ್ನು ಜ್ಞಾನದ ಯುಗವೆಂದು ಭಾವಿಸಿದ್ದು ಮಕ್ಕಳಿಗೆ ಅಕ್ಷರಾಭ್ಯಾಸ ನೀಡಿದರಷ್ಟೇ ಸಾಲದು ಬದಲಿಗೆ ಸಾಮಾನ್ಯ ಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ವೃತ್ತಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರೆ ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ವೈಜ್ಞಾನಿಕ ಮನೋಭಾವವನ್ನು ಪ್ರದರ್ಶಿಸಲು ವೇದಿಕೆಯಾಗಿದೆ ಎಂದರು.
ಮುಖಂಡರಾದ ಅಮ್ಜದ್, ಅಫ್ಜಲ್ಪಾಷ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಲಿ, ಶಾಲಾ ಶಿಕ್ಷಕರಾದ ಮೂಮೂನಾ ಬಾನು, ಮುಬೀನಾಬೇಗಂ, ಉಮ್ಮೇಜಕಿಯಾ, ಯಾಸ್ಮೀನಾ, ಸೈಯ್ಯದ್ ಜಿಯಾವುಲ್ಲಾ, ಕೃಷ್ಣಪ್ಪ, ಗೋವಿಂದಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.