ಇ-ಹರಾಜು ಪ್ರಕ್ರಿಯೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾಗಿದ್ದು ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿನ ಇ-–ಹರಾಜು ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ತಿಳಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪ್ರಾರಂಭವಾಗಿರುವ ಇ–ಹರಾಜು ಪದ್ದತಿಯನ್ನು ಕೈಬಿಡಬೇಕು ಎಂದು ಸ್ಥಳೀಯ ರೀಲರುಗಳು ನೀಡಿದ್ದ ಮನವಿಯ ಮೇರೆಗೆ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ರೈತರ ಹಾಗೂ ರೀಲರ್ಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಇ – ಹರಾಜು ಪ್ರಕ್ರಿಯೆಯ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಅವರು ಮಾತನಾಡಿದರು.
ತಾಂತ್ರಿಕ ಯುಗದಲ್ಲಿ ಎಲ್ಲೆಡೆಯೂ ಬದಲಾವಣೆ ಆಗುವಾಗ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯೂ ಇದಕ್ಕೆ ಹೊರತಾಗಿಲ್ಲ. ಇ–ಹರಾಜಿನಿಂದ ರೈತರು ಸೇರಿದಂತೆ ರೀಲರ್ಗಳಿಗೆ ಲಾಭವಿದ್ದು ಹೊಸ ತಂತ್ರಜ್ಞಾನಕ್ಕೆ ಎಲ್ಲರೂ ಹೊಂದಿಕೊಳ್ಳಬೇಕು ಎಂದರು.
ಇ–ಹರಾಜು ಪ್ರಕ್ರಿಯೆಯಲ್ಲಿರುವ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಜರುಗಿಸಲಾಗುವುದು. ತಾಲ್ಲೂಕಿನ ಬಹುತೇಕ ರೀಲರ್ಗಳು ಅವಿದ್ಯಾವಂತರಾಗಿದ್ದು ಇ–ಹರಾಜಿನಲ್ಲಿ ಮೊಬೈಲ್ ಮೂಲಕ ಬಿಡ್ ಮಾಡಲಾಗುವುದಿಲ್ಲ ಹಾಗಾಗಿ ಶಾಲೆಗೆ ಹೋಗುವ ಮಕ್ಕಳನ್ನು ಶಾಲೆಗೆ ರಜೆ ಹಾಕಿಸಿ ಮಾರುಕಟ್ಟೆಗೆ ಕರೆತಂದು ಬಿಡ್ ಮಾಡಿಸಬೇಕು ಎಂಬ ರೀಲರ್ಗಳ ಸಮಸ್ಯೆಗೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಇ–ಹರಾಜಿನಲ್ಲಿ ಬಿಡ್ ಮಾಡಲು ಸೂಕ್ತ ಸಿಬ್ಬಂದಿ ನೇಮಿಸಿಕೊಡುವುದಾಗಿ ಭರವಸೆ ನೀಡಿದರು. ಆದರೆ ಕೆಲವು ರೀಲರ್ಗಳು ಇದ್ಯಾವದಕ್ಕೂ ಒಪ್ಪದೇ ಕೂಡಲೇ ಇ–ಹರಾಜು ಪ್ರಕ್ರಿಯೆ ನಿಲ್ಲಿಸಬೇಕು ಇಲ್ಲವಾದಲ್ಲಿ ಸೋಮವಾರ ಮಾರುಕಟ್ಟೆಯ ಮುಂಭಾಗ ರೀಲರ್ಗಳೆಲ್ಲಾ ಸೇರಿ ಮುಷ್ಕರ ಮಾಡುವುದಾಗಿ ಹೇಳಿ ಸಭೆಯಿಂದ ಹೊರ ನಡೆದರು.
ಇ–ಹರಾಜಿನ ಪರ ನಿಂತ ರೈತರು: ಮಾರುಕಟ್ಟೆಯಲ್ಲಿ ಇ–ಹರಾಜು ಪದ್ದತಿಯನ್ನು ಜಾರಿಗೊಳಿಸಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ನಡೆಸಿದ್ದರ ಫಲವಾಗಿ ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಾರಂಭಿಸಿ ಮೂರೂವರೆ ತಿಂಗಳಾಗಿದೆ.
ಇದರಿಂದ ಈ ಹಿಂದೆ ಮಾರುಕಟ್ಟೆಯಲ್ಲಿ ಮದ್ಯವರ್ತಿಗಳಿಂದ ರೈತರಿಗೆ ಆಗುತ್ತಿದ್ದ ಮೋಸ ತಡೆಗಟ್ಟಿದಂತಾಗಿದೆ. ತಾವು ಬೆಳೆದ ಗೂಡಿಗೆ ಉತ್ತಮ ಧರ ಸೇರಿದಂತೆ ಸಮಯಕ್ಕೆ ಸರಿಯಾಗಿ ಹಣ ಪಡೆದು ವಾಪಸ್ಸಾಗುವ ಸ್ಥಿತಿಯಿದೆ.
ಶಿಡ್ಲಘಟ್ಟ ಮಾತ್ರವಲ್ಲದೇ ರಾಜ್ಯದ ರಾಮನಗರ, ಚನ್ನಪಟ್ಟಣ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿಯೂ ಕೂಡಾ ಇ-–ಹರಾಜು ಪ್ರಾರಂಭವಾಗಿ ಸುಗಮವಾಗಿ ನಡೆಯುತ್ತಿದ್ದು, ಅದೇ ಮಾದರಿಯಲ್ಲ ಇಲ್ಲಿಯೂ ಪ್ರಾರಂಭವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆಯುತ್ತಿದ್ದು, ಮಾರುಕಟ್ಟೆಯಲ್ಲಿಯೂ ಕೂಡಾ ಈ ಪದ್ದತಿಯನ್ನು ಅಳವಡಿಸಿರುವುದು ಉತ್ತಮ. ರೈತರಿಗೂ ಕೂಡಾ ವೈಜ್ಞಾನಿಕವಾಗಿ ಜಾಗೃತಿ ಮೂಡುತ್ತಿದ್ದು ರೈತರು ಮಾರುಕಟ್ಟೆ ಗೂಡು ತೆಗೆದುಕೊಂಡು ಬಂದು ನಿರಾಯಾಸವಾಗಿ ವಾಪಸ್ಸು ಹೋಗುವಂತಾಗಿದೆ. ಯಾವುದೇ ಕಾರಣಕ್ಕೂ ಇ–-ಹರಾಜು ರದ್ದುಪಡಿಸಬಾರದು. ಒಂದು ವೇಳೆ ರದ್ದುಪಡಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ರೈತರೆಲ್ಲಾ ಸೇರಿ ಉಗ್ರ ಹೋರಾಟಗಳನ್ನು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಹವಾಲು ಮಂಡಿಸಿದರು.
ಇ–ಹರಾಜು ನಿಲ್ಲಿಸಬೇಕು ಎಂದ ರೀಲರ್ಗಳು: ರೀಲರುಗಳ ಸಭೆಯಲ್ಲಿ ಇ-–ಹರಾಜು ಪದ್ದತಿಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಷ್ಟು ಗೂಡುಗಳನ್ನು ಖರೀದಿ ಮಾಡಲು ಸಾದ್ಯವಾಗುತ್ತಿಲ್ಲ. ಕೆಲವೊಮ್ಮೆ ನಾವು ಎಷ್ಟು ಲಾಟುಗಳಿಗೆ ಬಿಡ್ ಮಾಡುತ್ತೇವೊ ಅಷ್ಟು ಲಾಟುಗಳು ನಮಗೆ ಸಿಗುತ್ತವೆ. ಕೆಲವೊಮ್ಮೆ ಒಂದು ಲಾಟು ಸಹ ಸಿಗುವುದಿಲ್ಲ. ಗೂಡು ಹೆಚ್ಚಾಗಿ ಸಿಕ್ಕಾಗ ಹಣಕಾಸಿನ ತೊಡಕು ಉಂಟಾಗುತ್ತದೆ. ಸಿಗದಿದ್ದಾಗ ನಾವು ತಂದ ಹಣ ಹಾಗೆ ವಾಪಸ್ ತೆಗೆದುಕೊಂಡು ಹೋಗಬೇಕಾಗುತ್ತದೆ.
ನಗರದ ಶೇ. ೮೦ ರಷ್ಟು ಜನರು ಇದೇ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು ನಮಗೆ ಕಾರ್ಮಿಕರು ಸಿಗದೇ ಕುಟುಂಬದವರೆಲ್ಲರೂ ಇದೇ ಕಸುಬಿನಲ್ಲಿ ತೊಡಗಿಸಿಕೊಂಡಿದ್ದೇವೆ. ಸುಮಾರು ೪೦ ವರ್ಷಗಳಿಂದ ಗೂಡು ಖರೀದಿ ಮಾಡಿಕೊಂಡು ಬರುತ್ತಿರುವ ರೀಲರುಗಳಲ್ಲಿ ಅವಿದ್ಯಾವಂತರೇ ಹೆಚ್ಚಾಗಿದ್ದೇವೆ. ಮೊಬೈಲ್ಗಳ ಮೂಲಕ ಹರಾಜು ಬಿಡ್ ಮಾಡಲು ಬರುವುದಿಲ್ಲ ಇದರಿಂದ ಶಾಲಾ ಕಾಲೇಜುಗಳಿಗೆ ಹೋಗುವಂತಹ ಮಕ್ಕಳನ್ನು ಕರೆದುಕೊಂಡು ಬಂದು ಹರಾಜಿನಲ್ಲಿ ಭಾಗವಹಿಸಬೇಕು ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.
ಮಾರುಕಟ್ಟೆಯಲ್ಲಿ ತುಂಬಾ ತಡವಾಗುವುದರಿಂದ ಗುಣಮಟ್ಟದ ನೂಲು ಬಿಚ್ಚಾಣಿಕೆ ಆಗುತ್ತಿಲ್ಲ. ರೇಷ್ಮೆಯ ನೂಲನ್ನು ೨ ಸಾವಿರ ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ. ನಾವು ವ್ಯಾಪಾರಸ್ಥರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ದೊಡ್ಡ ರೀಲರುಗಳು ಉಳಿಯಬಹುದು, ಸಣ್ಣ ಮತ್ತು ಮಧ್ಯಮ ವರ್ಗದ ರೀಲರುಗಳು ಉಳಿಯುವುದು ಕಷ್ಟಕರವಾಗಿದೆ. ಇ-–ಹರಾಜು ಪದ್ದತಿಯನ್ನು ರದ್ದುಗೊಳಿಸಿ ಮೊದಲಿನಂತೆ ಹರಾಜು ಕೂಗಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ನಾವು ಹೋರಾಟ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದರು.
ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ನಡೆದ ಸಭೆ ವಿಫಲ: ರೈತರು ಹಾಗೂ ರೀಲರುಗಳೊಂದಿಗೆ ಚರ್ಚೆ ಮಾಡಿದ ಜಿಲ್ಲಾಧಿಕಾರಿಗಳು ಎರಡೂ ಕಡೆಯ ಮುಖಂಡರುಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಯನ್ನು ಇತ್ಯರ್ಥ ಪಡಿಸೋಣವೆಂದು ಮನವೊಲಿಸಲು ಯತ್ನಸಿದರು.
ಮಾರುಕಟ್ಟೆಯಲ್ಲಿ ರೀಲರುಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ರೀಲರುಗಳಿಗೆ ಅನುಕೂಲವಾಗುವಂತೆ ಸಿಬ್ಬಂದಿಯನ್ನು ನೇಮಕ ಮಾಡಿ ಹರಾಜು ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲಾಗುತ್ತದೆ. ಹರಾಜಿನ ಸಮಯ ಬದಲಾವಣೆ ಮಾಡಲು ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರೂ ಇದ್ಯಾವದಕ್ಕೂ ಒಪ್ಪದ ರೀಲರುಗಳು ನಮಗೆ ಯಾವುದೇ ಕಾರಣಕ್ಕೂ ಇ-–ಹರಾಜು ಪ್ರಕ್ರಿಯೆ ಬೇಕಿಲ್ಲ ಈ ಕೂಡಲೇ ಸ್ಥಗಿತಗೊಳಿಸಿ ಇಲ್ಲವಾದಲ್ಲಿ ಮುಂದಿನ ಸೋಮವಾರ ಮಾರುಕಟ್ಟೆಯ ಮುಂಭಾಗ ತಾಲ್ಲೂಕಿನಲ್ಲಿರುವ ಎಲ್ಲಾ ರೀಲರ್ಗಳು ಒಟ್ಟಾಗಿ ಮುಷ್ಕರ ನಡೆಸುವುದಾಗಿ ಹೇಳಿ ಸಭೆಯಿಂದ ಹೊರನಡೆದರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಎಸ್.ಆರ್.ಪ್ರಭಾಕರ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಎಂ.ಎನ್.ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಯಲುವಹಳ್ಳಿ ಸೊಣ್ಣೇಗೌಡ, ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಮಳ್ಳೂರು ಶಿವಣ್ಣ, ವೇಣು, ಅಬ್ಲೂಡು ದೇವರಾಜ್, ರೀಲರ್ಗಳಾದ ಯೂಸುಫ್, ಅಕ್ಮಲ್ಪಾಷ, ಅನ್ವರ್ಪಾಷ, ಸಮೀವುಲ್ಲಾ, ಸೈಯ್ಯದ್, ನಾಗನರಸಿಂಹ, ಡಿ.ಎಂ.ಜಗದೀಶ್ವರ್, ರಾಮಕೃಷ್ಣಪ್ಪ, ರೆಹಮಾನ್, ಅಜೀಜ್ಸಾಬ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -