ಶಿಡ್ಲಘಟ್ಟದಲ್ಲಿ ಜನಿಸಿದ ಎನ್.ಆರ್. ನಾರಾಯಣಮೂರ್ತಿಯವರು ವಿಶ್ವವೇ ಬೆರಗಾಗುವಂತ ಸಾಧನೆ ಮಾಡಿದ್ದಾರೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ನಂತರ ನಮ್ಮ ರಾಜ್ಯದ ಹೆಸರು ಜಗತ್ತಿನಾದ್ಯಂತ ಮೆರೆಯುವಂತೆ ಮಾಡಿದ ಮಹಾನ್ ತಾಂತ್ರಿಕ ತಜ್ಞರಾದ ಅವರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ತಾಲ್ಲೂಕು ಕ ಸಾ ಪ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಲಸ್ಯವೇ ಮರಣ, ಜಾಗೃತಿಯೇ ಜೀವನ’ ಎಂಬುದು ನಾರಾಯಣಮೂರ್ತಿಯವರ ಸಿದ್ಧಾಂತ. ನ್ಯಾಯಬದ್ಧ ಮಾರ್ಗದಲ್ಲಿ ಹಣದ ರಾಶಿಯನ್ನೇ ಕೂಡಿಹಾಕಿದ ಸಾಫ್ಟ್ವೇರ್ ಸಂತರೆಂದೇ ಪ್ರಸಿದ್ಧರು. ಶಾಲಾ ಮಾಸ್ತರರ ಮಗನೊಬ್ಬ ಇಂದು ಪ್ರಪಂಚದ ಗಮನಾರ್ಹ ಉದ್ಯಮಿಯಾಗಿ ಬೆಳೆದು ನಿಂತ ಯಶೋಗಾಥೆ ಅದರಲ್ಲೂ ನಮ್ಮ ತಾಲ್ಲೂಕಿನವರೇ ಈ ಸಾಧನೆ ಮಾಡಿರುವುದು ನಮಗೆಲ್ಲಾ ಹೆಮ್ಮೆ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಎಂದು ನುಡಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಹತ್ತನೇ ತರಗತಿಯ ದಿವ್ಯಾ, ರಕ್ಷಿತಾ ಮತ್ತು ರಘು ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ನಯನಾ, ಹರ್ಷಿಯಾ ಮತ್ತು ಪ್ರದೀಪ್ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ‘ಕೃಷ್ಣದೇವರಾಯ’, ‘ಅಬ್ದುಲ್ ಕಲಾಂ’, ‘ಶುಶೃತಾ’, ‘ಸ್ವಾಮಿ ವಿವೇಕಾನಂದ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ. ತ್ಯಾಗರಾಜ್, ಸದಸ್ಯರಾದ ಮುನಿರಾಜು, ರಮೇಶ್, ಜಗದೀಶ್ ಬಾಬು, ನಾಗರಾಜ್, ದೇವರಾಜ್, ಮಂಜುನಾಥ್, ಪವನ್ ಕುಮಾರ್, ಚಂದ್ರಶೇಖರ್ ಹಡಪತ್, ಗುರುನಂಜಪ್ಪ, ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್, ಉಪನ್ಯಾಸಕರಾದ ಉಪೇಂದ್ರಕುಮಾರ್, ಮುನಿಯಪ್ಪ, ನಾಗೇಶ್, ಪ್ರಜ್ವಲ್, ಚಂದ್ರಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.