Home News ಆರನೇ ದಿನಕ್ಕೆ ಕಾಲಿಟ್ಟ ರೀಲರುಗಳ ಮುಷ್ಕರಕ್ಕೆ ರಾಜ್ಯ ಮುಖಂಡರ ಬೆಂಬಲ

ಆರನೇ ದಿನಕ್ಕೆ ಕಾಲಿಟ್ಟ ರೀಲರುಗಳ ಮುಷ್ಕರಕ್ಕೆ ರಾಜ್ಯ ಮುಖಂಡರ ಬೆಂಬಲ

0

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೀಲರುಗಳು ಇ–ಹರಾಜು ನಿಲ್ಲಿಸಿ ಬಹಿರಂಗ ಹರಾಜನ್ನು ನಡೆಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳೀಯರಿಗೆ ಬೆಂಬಲವಾಗಿ ರಾಜ್ಯದ ಮುಖಂಡರು ಶನಿವಾರ ಆಗಮಿಸಿದ್ದರು.
ರೀಲರುಗಳ ಸಂಘದ ರಾಜ್ಯ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಇ–ಹರಾಜಿನ ಸಮಸ್ಯೆಯ ಬಗ್ಗೆ ಆಯುಕ್ತರನ್ನು ಸೋಮವಾರ ಭೇಟಿ ಮಾಡಿ ತಿಳಿಸುತ್ತೇನೆ. ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ರಾಜ್ಯದ ಎಲ್ಲಾ ಮಾರುಕಟ್ಟೆಗಳಲ್ಲೂ ರೀಲರುಗಳ ಮುಷ್ಕರ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಮನಗರ ರೀಲರುಗಳ ಸಂಘದ ಅಧ್ಯಕ್ಷ ಮೊಯುದ್ದೀನ್, ವಿಜಯಪುರ ಭಾರತ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಾದಿಕ್ ಪಾಷ ಹಾಜರಿದ್ದರು.
ಮೂವರು ಜಂಟಿ ನಿರ್ದೇಶಕರ ಭೇಟಿ: ರೇಷ್ಮೆ ಗೂಡಿನ ಮಾರುಕಟ್ಟೆಗೆ ಶನಿವಾರ ರೇಷ್ಮೆ ಇಲಾಖೆಯ ಮೂವರು ಜಂಟಿ ನಿರ್ದೇಶಕರು ಶನಿವಾರ ಭೇಟಿ ನೀಡಿದ್ದರು. ಬೆಂಗಳೂರು ವಿಭಾಗದ ಎಚ್.ಆರ್.ಪ್ರಭಾಕರ್, ಮಾರುಕಟ್ಟೆ ವಿಭಾಗದ ವೆಂಕಟರಾವ್, ಸಹಕಾರ ಸಂಘದ ವಿಭಾಗದ ಸಂತೋಷ್ಕುಮಾರ್ ಭೇಟಿ ನೀಡಿದ್ದರು. ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಮಳ್ಳೂರು ಹರೀಶ್, ತಾದೂರು ಮಂಜುನಾಥ್ ಮತ್ತಿತರ ರೇಷ್ಮೆ ಬೆಳೆಗಾರರೊಂದಿಗೆ ಅವರು ಚರ್ಚಿಸಿದರು. ‘ರೀಲರುಗಳಿಗೆ ರಾಜ್ಯದ ಯಾವುದೇ ಮಾರುಕಟ್ಟೆಯಲ್ಲಿ ಗೂಡು ಕೊಳ್ಳಲು ಲೈಸೆನ್ಸ್ ನೀಡಲಾಗಿರುತ್ತದೆ. ರೈತರು ನೂರಾರು ಕಿ.ಮೀ ದೂರದಿಂದ ರೇಷ್ಮೆ ಗೂಡು ತಂದು ತಮಗೆ ಅನುಕೂಲಕರವಾದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಮುಂದುವರೆಯಲಿ. ಬಹಿರಂಗ ಹರಾಜು ಬೇಕಿರುವವರು ಬಹಿರಂಗ ಹರಾಜು ನಡೆಯುವ ಮಾರುಕಟ್ಟೆಯಲ್ಲಿ ಹೋಗಿ ಕೊಳ್ಳಬಹುದು’ ಎಂದು ರೈತ ಮುಖಂಡರು ತಿಳಿಸಿದರು.
ಬಹಿರಂಗ ಹರಾಜು ಬೇಕು ಎಂದ ಕೆಲವು ರೈತರು: ತಾಲ್ಲೂಕಿನ ಹೇಮಾರ್ಲಹಳ್ಳಿ, ಮಳಮಾಚನಹಳ್ಳಿ, ಆನೂರು ಮೊದಲಾದೆಡೆಗಳಿಂದ ಬಂದಿದ್ದ ಕೆಲವು ರೈತರು ಮಾರುಕಟ್ಟೆಯಲ್ಲಿ ಬಹಿರಂಗ ಹರಾಜನ್ನೇ ಮುಂದುವರೆಸಬೇಕು. ಹರಾಜು ನಿಂತಿರುವುದರಿಂದ ಬಡ ರೈತರಿಗೆ ಅನ್ಯಾಯವಾಗುತ್ತಿದೆ. ಅದನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ರೀಲರುಗಳನ್ನು ಭೇಟಿಯಾಗದ ಅಧಿಕಾರಿಗಳು: ಕೇವಲ ಕೆಲವೇ ರೈತರನ್ನು ಭೇಟಿಯಾಗಿ ನಮ್ಮ ಸಮಸ್ಯೆಯನ್ನು ಆಲಿಸದೆ ಅಧಿಕಾರಿಗಳು ಹಿಂದಿನ ಬಾಗಿಲಿನಿಂದ ಬಂದು ಹೋಗಿದ್ದಾರೆ. ಭಾಷಣದಲ್ಲಿ ಮಾತ್ರ ರೈತರು ರೀಲರುಗಳು ಎರಡು ಕಣ್ಣುಗಳಿದ್ದಂತೆ ಎನ್ನುತ್ತಾರೆ. ಆದರೆ ತಾರತಮ್ಯ ಮುಂದುವರೆಸುತ್ತಾರೆ ಎಂದು ರೀಲರ್ ರಾಮಕೃಷ್ಣಪ್ಪ ತಿಳಿಸಿದರು.