Home News ‘ಅಮೃತ’ಳಿಗೆ ರಾಜ್ಯಮಟ್ಟದ ಪ್ರಶಸ್ತಿ

‘ಅಮೃತ’ಳಿಗೆ ರಾಜ್ಯಮಟ್ಟದ ಪ್ರಶಸ್ತಿ

0

ಹೆಣ್ಣುಮಕ್ಕಳ ಸಂವೇದನೆ, ನೋವು, ದುಗುಡ, ದುಃಖ, ಆಕಾಂಕ್ಷೆ, ಬೇಸರ, ಕೋಪ ತಾಪಗಳನ್ನು ಪ್ರತಿಧ್ವನಿಸುವ ಬರಹಗಳಿಗಾಗಿ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೃತ, ರಾಜ್ಯ ಮಟ್ಟದ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಪಡೆದಿದ್ದಾಳೆ.
ಕನ್ನಮಂಗಲ ಗ್ರಾಮದ ಕೆ.ಎನ್.ಅಮೃತ ಪ್ರಾಥಮಿಕ ಶಿಕ್ಷಣವನ್ನು ಪಡೆದದ್ದು ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಂತರ ಈಗ ಓದುತ್ತಿರುವುದು ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ.
‘ಕನ್ನಮಂಗಲ ಶಾಲೆಯಲ್ಲಿನ ಸಾಹಿತ್ಯಿಕ ವಾತಾವರಣ ‘ನಾನೂ ಬರೆಯಬಲ್ಲೆ’ ಎಂಬ ಆತ್ಮವಿಶ್ವಾಸ ಮೂಡಿಸಿತು. ಕನ್ನಮಂಗಲದ ಸ್ನೇಹ ಪ್ರಕಾಶನದ ವಸಂತಕುಮಾರ್ ನೇತೃತ್ವದಲ್ಲಿ ಪ್ರತೀ ವರ್ಷ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬರೆದ ಬರವಣಿಗೆಗಳ ಸಂಕಲನ ‘ಶಾಮಂತಿ’ ಹೊರತರುವುದರಿಂದಾಗಿ ಹಲವಾರು ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ಅದರಲ್ಲಿ ನನ್ನ ಬರಹಗಳು ಪ್ರಕಟವಾದಾಗ ಖುಷಿಯಾಯಿತು. ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಕೈಗೊಂಡ ನನಗೆ ಅಲ್ಲಿಯೂ ಶಿಕ್ಷಕರ ಪ್ರೋತ್ಸಾಹ ಲಭಿಸಿತು. ಹೀಗಾಗಿ ನನ್ನ ಅನಿಸಿಕೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸಲು ಸಾಧ್ಯವಾಯಿತು’ ಎಂದು ಕೆ.ಎನ್.ಅಮೃತ ತಿಳಿಸಿದರು.