ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮ ಯುವಕರ ಸಂಘದ ವತಿಯಿಂದ ಶ್ರೀರಾಮ ಸಪ್ತಾಹ ಮತ್ತು 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಮೂರು ದಿನಗಳ ಕಾಲ ನಡೆದ ಅಖಂಡ ಶ್ರೀರಾಮ ನಾಮ ಸಪ್ತಾಹವು ಸೋಮವಾರಕ್ಕೆ ಕೊನೆಗೊಂಡಿತು. ಹಗಲು ರಾತ್ರಿ ನಡೆದ ಭಜನೆಯ ಸಂದರ್ಭದಲ್ಲಿ ದೇವರಿಗೆ ವಿವಿಧ ರೀತಿಯ ಅಲಂಕಾರಗಳನ್ನು ಮಡಿದ್ದಲ್ಲದೆ, ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವಿತರಣೆಯನ್ನೂ ನಡೆಸಲಾಗುತ್ತಿತ್ತು. ಸೋಮವಾರ ಸಂಜೆ ತಂಬಿಟ್ಟು ದೀಪೋತ್ಸವವನ್ನು ಆಚರಿಸಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಮಹಿಳೆಯರು ದೀಪಗಳನ್ನು ತಂದು ದೇವರಿಗೆ ಪೂಜೆ ಸಲ್ಲಿಸಿದರು.
‘ಲೋಕಕಲ್ಯಾಣಕ್ಕಾಗಿ, ಕಾಲಕಾಲಕ್ಕೆ ಮಳೆ ಬೆಳೆ ಆಗಲೆಂಬ ಸದುದ್ದೇಶದಿಂದ ರಾಮಕೋಟಿ ಭಜನೆಯನ್ನು ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ಒಳ್ಳೆಯ ಆಲೋಚನೆ, ಒಳ್ಳೆಯ ಮಾತು, ಪರಹಿತ ಚಿಂತನೆಯುಳ್ಳ ರಾಮನ ಅನುಗ್ರಹವಾಗಿ ನಮ್ಮೆಲ್ಲರ ಕಷ್ಟ ನಿವಾರಣೆಯಾಗಿ ನೆಮ್ಮದಿಯಿಂದ ಬದುಕುವಂತೆ ಪ್ರಾರ್ಥಿಸುತ್ತೇವೆ’ ಎಂದು ಶ್ರೀರಾಮ ಯುವಕರ ಸಂಘದವರು ತಿಳಿಸಿದರು.