ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತನೆ ಮಾಡಿ ಅವರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡುವಂತೆ ಶಾಸಕ ಎಂ.ರಾಜಣ್ಣ ಸೂಚಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಅವರು ನಡೆಸಿ ಮಾತನಾಡಿದರು. ಅಧಿಕಾರಿಗಳು ನಾಗರಿಕರೊಂದಿಗೆ ಸೌಜನ್ಯದಿಂದ ವರ್ತನೆ ಮಾಡುತ್ತಿಲ್ಲ. ವಿನಾಕಾರಣ ತಾಲ್ಲೂಕು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಕೆಲಸಗಳಾಗುತ್ತಿಲ್ಲವೆಂಬ ದೂರುಗಳು ಸಾರ್ವಜನಿಕರಿಂದ ಬರಬಾರದು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಬಹಳಷ್ಟು ಮಂದಿ ವೃದ್ದರು ವೃದ್ದಾಪ್ಯ ವೇತನ, ಸಂದ್ಯಾ ಸುರಕ್ಷಾ ವೇತನಗಳು ಸ್ಥಗಿತವಾಗಿದ್ದು, ಬಹಳಷ್ಟು ಪರದಾಡುತ್ತಿದ್ದಾರೆ, ಸ್ಥಗಿತವಾಗಿರುವ ಫಲಾನುಭವಿಗಳನ್ನು ಪಟ್ಟಿಗಳನ್ನು ಗ್ರಾಮಲೆಕ್ಕಾಧಿಕಾರಿಗಳ ಮುಖಾಂತರ ತಯಾರಿಸಿ ವೃದ್ಧರಿಗೆ ಅನುಕೂಲ ಮಾಡಿಕೊಡುವಂತೆ ತಹಶೀಲ್ದಾರರಿಗೆ ತಿಳಿಸಿದರು.
ಕಂಪ್ಯೂಟರ್ ಕೊಠಡಿಯಲ್ಲಿ ಅಕ್ರಮವಾಗಿ ಫಹಣಿಗಳಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎನ್ನುವ ದೂರುಗಳು ಬರುತ್ತಿವೆ. ಇಂತಹ ವಿಚಾರಗಳಲ್ಲಿ ಸಂಬಂಧಪಟ್ಟ ರಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಗಮನಹರಿಸಬೇಕು. ನ್ಯಾಯಾಲಯಗಳಲ್ಲಿದ್ದರೆ, ವಿಳಂಬವಾಗುವ ಬಗ್ಗೆ ನಾಗರೀಕರಿಗೆ ಮನವರಿಕೆ ಮಾಡಿಕೊಡಿ, ಭೂ ಮಾಪನ ಇಲಾಖೆಯಲ್ಲಿಯೂ ಕೂಡಾ ಅರ್ಜಿಗಳು ಬಂದಾಗ ಅರ್ಜಿದಾರರಿಗೆ ಯಾವಾಗ ಭೂಮಿಯನ್ನು ಅಳತೆ ಮಾಡಲಾಗುತ್ತದೆ ಎನ್ನುವ ಬಗ್ಗೆಯೂ ಸ್ಪಷ್ಟವಾಗಿ ತಿಳುವಳಿಕೆ ಹೇಳಿ ವಿನಾಕಾರಣ ಅಲೆದಾಡಿಸಬೇಡಿ ಎಂದರು.
ರೆಕಾರ್ಡ್ ವಿಭಾಗದಲ್ಲಿ ರಾತ್ರಿಯ ವೇಳೆಯಲ್ಲಿ ಪ್ರಭಾವಿಗಳು, ಅನಾಮಧೇಯ ವ್ಯಕ್ತಿಗಳು ಬಂದು ಕಡತಗಳನ್ನು ಹುಡುಕಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ, ಬಡವರ ಮೂಲ ಕಡತಗಳನ್ನು ಕಬಳಿಸಿಕೊಂಡು ಹೋದರೆ ಯಾರು ಹೋಣೆ ಎಂದು ಶಾಸಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಭೂ ಮಾಪನ ಇಲಾಖೆಯ ಪರಿವೀಕ್ಷಕರು ಮಾತನಾಡಿ, ಅಳತೆ ಕಾರ್ಯದ ಬಗ್ಗೆ ಬಂದಿರುವ ಎಲ್ಲಾ ಅರ್ಜಿಗಳು ಆನ್ಲೈನ್ನಲ್ಲಿ ಬಂದಿವೆ. ಸುಮಾರು ೭ ವರ್ಷಗಳಲ್ಲಿ ೭೦೦೦ ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ಎಲ್ಲಾ ಅರ್ಜಿಗಳು ಆನ್ಲೈನ್ ಆಗಿರುವುದರಿಂದ ಪ್ರತಿಯೊಂದು ಅರ್ಜಿಯ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿರುವುದರಿಂದ ಸೀರಿಯಲ್ ಪ್ರಕಾರವೇ ಅಳತೆ ಮಾಡಬೇಕು, ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಕಡತಗಳನ್ನು ವಿಲೇವಾರಿಗೊಳಿಸಲಾಗುತ್ತದೆ ಎಂದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಆಹಾರ ಇಲಾಖೆಯ ನಿರೀಕ್ಷಕ ಶ್ರೀಧರ್, ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -