ಸುಸಜ್ಜಿತವಾದ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿಯೆ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಸುವ ಭಾಗ್ಯ ಪೊಲೀಸರದ್ದಾಗಲಿದೆ.
ನಗರದಲ್ಲಿರುವ ನಗರ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷಗಳಿಂದಲೂ ಮಳೆ ಬಂದರೆ ಸಿಮೆಂಟು ಶೀಟುಗಳ ಮೇಲ್ಚಾವಣಿಯಿಂದ ಮಳೆ ನೀರು ಸುರಿಯುವಂತ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ನಾಗರೀಕರಿಗೆ ಮಾತ್ರವಲ್ಲ ಸ್ವತಃ ಪೊಲೀಸರಿಗೆ ಮೂಲ ಸೌಕರ್ಯಗಳಿಲ್ಲದೆ ಪರದಾಡುವಂತಾಗಿತ್ತು.
ಆದರೆ ಇದೀಗ ನಗರದ ದಿಬ್ಬೂರಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಇರುವ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿಯೆ ಹೊಸ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು ಶೀಘ್ರದಲ್ಲಿಯೆ ಅಲ್ಲಿಗೆ ಪೊಲೀಸ್ ಠಾಣೆ ಸ್ಥಳಾಂತರವಾಗಲಿದೆ.
ಪೊಲೀಸ್ ವಸತಿ ಗೃಹ ನಿರ್ಮಾಣ ಮಂಡಳಿಯಿಂದ ಬಹುಲಕ್ಷ ವೆಚ್ಚದಲ್ಲಿ ಒಂದಸ್ತಿನ ಸುಸಜ್ಜಿತ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣವಾಗುತ್ತಿದ್ದು, ಆ ಕಟ್ಟಡದಲ್ಲಿ ನಗರ ಠಾಣೆ ಅಥವಾ ಗ್ರಾಮಾಂತರ ಠಾಣೆಯಲ್ಲಿ ಯಾವುದು ಅಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
‘ಹೊಸ ಪೊಲೀಸ್ ಠಾಣೆ ಕಟ್ಟಡ ಕಾಮಗಾರಿ ಶೇ ೯೦ರಷ್ಟು ಮುಗಿದಿದ್ದು ಇನ್ನುಳಿದ ಭಾಗದ ಕಾಮಗಾರಿ ಶೀಘ್ರದಲ್ಲಿಯೆ ಮುಗಿಯಲಿದೆ. ಅಲ್ಲಿಗೆ ನಗರ ಅಥವಾ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಯಾವುದು ಸ್ಥಳಾಂತರವಾಗಲಿದೆ ಎಂದು ಇನ್ನೂ ನಿರ್ಧಾರವಾಗಿಲ್ಲ. ಕಟ್ಟಡ ನಿರ್ಮಾಣ ಪೂರ್ತಿಯಾದ ನಂತರ ಕಟ್ಟಡವನ್ನು ನಮ್ಮ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಆನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟಡಕ್ಕೆ ಯಾವ ಠಾಣೆಯನ್ನು ಸ್ಥಳಾಂತರ ಮಾಡಬೇಕು ಹಾಗೂ ಯಾವಾಗ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಬೇಕೆಂಬ ಎಲ್ಲ ವಿಚಾರಗಳನ್ನು ನಿರ್ಧರಿಸಲಿದ್ದಾರೆ. ಯಾವುದೆ ಠಾಣೆ ಕಾರ್ಯನಿರ್ವಹಿಸಿದರೂ ಸರಿಯೆ ಅಲ್ಲಿ ಪೊಲೀಸರಿಗೆ ಹಾಗೂ ಠಾಣೆಗೆ ಕೆಲಸ ಕಾರ್ಯ, ಪ್ರಕರಣಗಳ ಸಂಬಂಧ ಬರುವ ನಾಗರಿಕರಿಗೂ ಮೂಲ ಸೌಲಭ್ಯಗಳು ಸಿಗಲಿವೆ’ ಎನ್ನುತ್ತಾರೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ.
- Advertisement -
- Advertisement -
- Advertisement -
- Advertisement -