ಅಂಗವಿಕಲರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಲ್ಲಿ ಅವರಲ್ಲಿರುವ ಪ್ರತಿಭೆಯನ್ನು ಸಮಾಜದ ಮುಂದೆ ಪ್ರದರ್ಶಿಸಲು ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹೇಳಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಅಂಗವಿಕಲ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಂಗವಿಕಲತೆ ಎನ್ನುವುದು ಶಾಪವಲ್ಲ. ಮಕ್ಕಳಲ್ಲಿರುವ ಪ್ರತಿಭೆ ಹಾಗು ಸಾಮರ್ಥ್ಯವನ್ನು ಕೇವಲ ಅವರ ಅಂಗ ವೈಕಲ್ಯದಿಂದ ಅಳೆದು ಅದನ್ನು ನಶಿಸುವಂತೆ ಮಾಡುವುದನ್ನು ಮೊದಲು ಪೋಷಕರು ಬಿಡಬೇಕು.
ಪೋಷಕರು ಅಂಗವಿಕಲ ಮಕ್ಕಳ ಬಗ್ಗೆ ಅಸಡ್ಡೆ ತೋರುವ ಬದಲಿಗೆ ಸಮಾಜ ಅವರನ್ನು ಗುರುತಿಸುವಂತೆ ಮಾಡಲು ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕು ಎಂದರು.
ಶಿಕ್ಷಕರೂ ಕೂಡಾ ಎಲ್ಲ ಮಕ್ಕಳ ಜೊತೆ ಬೆರೆತು ಕಲಿಯುವಂತಹ ವಾತಾವರಣ ನಿರ್ಮಿಸಿಕೊಡುವುದರೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತಹ ಅವಕಾಶ ಕಲ್ಪಿಸಿಕೊಡಬೇಕು. ಈಗಾಗಲೇ ತಾಲ್ಲೂಕಿನಾದ್ಯಂತ ೨೫೦ ಮಂದಿ ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿದ್ದು ಎಲ್ಲಾ ಮಕ್ಕಳಿಗೂ ಈ ಶಿಬಿರದ ಮೂಲಕ ಅವರಿಗೆ ಅಗತ್ಯವಾಗಿರುವ ಪರಿಕರಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳಿಂದ ಅಂಗವಿಕಲ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಕೆ.ಸುಮಾ, ಜಂಗಮಕೋಟೆ ಸಿ.ಆರ್.ಪಿ. ಸುಂದರಾಚಾರಿ, ಮಂಜುನಾಥ್, ಲೋಕೇಶ್ನಾಯಕ್, ಮಧು, ಬುದ್ದಿಮಾಂದ್ಯ ಮಕ್ಕಳ ತಜ್ಞ ಹೇಮಂತ್, ದಿವ್ಯಾಚೌದರಿ, ಸತೀಶ್, ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಕಿಶೋರ್, ಸ್ವಾಮಿ ವಿವೇಕಾನಂದ ಅಂಗವಿಕಲ ಸಂಸ್ಥೆಯ ಮಾರಪ್ಪ, ಸಂತೋಷ್, ಕಾರ್ಯಕ್ರಮ ಸಂಚಾಲಕ ಜಾನ್ಮುರೇ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.