ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿದ್ದ ಹಳೆಯ ಕುಂಟೆಗಳನ್ನು ಸುಂದರ ನೀರಿನ ಹೊಂಡಗಳಾಗಿ ನರೇಗಾ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ನೀರು ತುಂಬಿಕೊಂಡ ನೀರಿನ ಹೊಂಡಗಳು ಬೇಸಿಗೆ ಸೇರಿದಂತೆ ಇಡೀ ವರ್ಷ ಆಯಾ ಗ್ರಾಮಗಳ ಜನ ಜಾನುವಾರುಗಳಿಗೆ ಜಲಮೂಲಗಳಾಗಿ ಅಕ್ಷಯ ನೀರಿನ ಪಾತ್ರೆಗಳಾಗಿವೆ.
ತಾಲ್ಲೂಕಿನ ಬೆಳ್ಳೂಟಿ, ಚೀಮಂಗಲ, ಸದ್ದಹಳ್ಳಿ, ಮಳಮಾಚನಹಳ್ಳಿ, ಈ.ತಿಮ್ಮಸಂದ್ರ, ಸುಂಡ್ರಹಳ್ಳಿ, ಎದ್ದಲತಿಪ್ಪೇನಹಳ್ಳಿ, ಹೊಸಪೇಟೆ, ಹಿರೇಬಲ್ಲ, ಚೌಡಸಂದ್ರ, ಕೊತ್ತನೂರು, ವೀರಾಪುರ, ಬಳುವನಹಳ್ಳಿ, ಭಕ್ತರಹಳ್ಳಿ, ದೊಡ್ಡಚೊಕ್ಕಂಡಹಳ್ಳಿ, ಹಾರಡಿ, ಕಾಳನಾಯಕನಹಳ್ಳಿ, ಮಲ್ಲೇನಹಳ್ಳಿ ಮುಂತಾಡೆ ಈಗಾಗಲೇ ನಿರ್ಮಾಣಗೊಂಡು ಮಳೆನೀರು ತುಂಬಿಕೊಂಡ ನೀರಿನ ಹೊಂಡಗಳು ತಮ್ಮ ಉಪಯುಕ್ತತೆಯನ್ನು ಸಾರುವಂತಿವೆ.
ಹಳ್ಳಿಗಳಲ್ಲಿ ಪಾಳುಬಿದ್ದ ಕುಂಟೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿ ಮಳೆ ನೀರು ಸಮರ್ಪಕವಾಗಿ ಶೇಕರಣೆಯಾಗುವಂತೆ ನೀರಿನ ಹೊಂಡಗಳನ್ನು ನಿರ್ಮಿಸಲಾಗಿದೆ. ಇವುಗಳಿಂದ ಒಂದೆಡೆ ಅಂತರ್ಜಲ ವೃದ್ಧಿ, ಮತ್ತೊಂದೆಡೆ ಜನ ಜಾನುವಾರುಗಳಿಗೆ ನಿರಂತರವಾಗಿ ನೀರು ಸಿಗುವಂತಾಗಿದೆ. ಹಿಂದೆಲ್ಲಾ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವಂತಿದ್ದ ಹಲವಾರು ಹಳ್ಳಿಗಳಿಗೆ ಈ ನೀರಿನ ಹೊಂಡಗಳು ವರದಾನವಾಗಿ ಪರಿಣಮಿಸಿವೆ.
ತಾಲ್ಲೂಕಿನ ಹಾರಡಿ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಹೊಂಡವು ಷಡ್ಭುಜ ಆಕಾರದಲ್ಲಿದೆ. ಅದರ ಸುತ್ತ ಪಾದಚಾರಿಗಳು ನಡೆದಾಡಲು ಪಥವನ್ನು ನಿರ್ಮಿಸಲಾಗಿದೆ. ಇದು ಸುಮಾರು 64 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಕಾಳನಾಯಕನಹಳ್ಳಿಯಲ್ಲಿನ ನೀರಿನ ಹೊಂಡವು 85 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಹೊಸಪೇಟೆ ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿನ ನೀರಿನ ಹೊಂಡವು ಈಜುಕೊಳದಂತೆ ಸುಂದರವಾಗಿದ್ದು, 76 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅಪ್ಪೇಗೌಡನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಹೊಂಡವು 27 ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು, ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ನೀರಿನ ಹೊಂಡವಾಗಲಿದೆ.
ಸೋಲಾರ್ ದೀಪ ಅಳವಡಿಕೆ : ತಾಲ್ಲೂಕಿನ ಹಾರಡಿ ಮತ್ತು ಕಾಳನಾಯಕನಹಳ್ಳಿಯಲ್ಲಿನ ನೀರಿನ ಹೊಂಡದ ಸುತ್ತ ಸೋಲಾರ್ ದೀಪಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಲಾಗಿದೆ. ರಾತ್ರಿ ವೇಳೆ ದೂರದಿಂದ ನೋಡಿದರೆ ಕ್ರಿಕೆಟ್ ಸ್ಟೇಡಿಯಮ್ ರೀತಿ ಇವು ಕಾಣುತ್ತವೆ.
– ಡಿ.ಜಿ.ಮಲ್ಲಿಕಾರ್ಜುನ